ಮೈಸೂರು ಅರಮನೆ ಬಳಿ ಸಿಲಿಂಡರ್ ಸ್ಫೋಟ: ಮೃತರ ಸಂಖ್ಯೆ ಮೂರಕ್ಕೆ ಏರಿಕೆ

Dec 27, 2025 - 10:01
 0  634
ಮೈಸೂರು ಅರಮನೆ ಬಳಿ ಸಿಲಿಂಡರ್ ಸ್ಫೋಟ: ಮೃತರ ಸಂಖ್ಯೆ ಮೂರಕ್ಕೆ ಏರಿಕೆ
Photo credit: TV09

ಮೈಸೂರು, ಡಿ.26: ಮೈಸೂರು ಅರಮನೆ ಸಮೀಪ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಫೋಟ ದುರಂತದಲ್ಲಿ ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಬೆಂಗಳೂರು ಮೂಲದ ಲಕ್ಷ್ಮೀ ಅವರು ಶುಕ್ರವಾರ ರಾತ್ರಿ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬದ ಸದಸ್ಯರೊಂದಿಗೆ ಮೈಸೂರು ಪ್ರವಾಸಕ್ಕೆ ಬಂದಿದ್ದ ವೇಳೆ ಲಕ್ಷ್ಮೀ ಅವರಿಗೆ ಸ್ಫೋಟದಿಂದ ಗಾಯಗಳಾಗಿತ್ತು ಎನ್ನಲಾಗಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಅವರ ಪುತ್ರಿ ಡಿಂಪಲ್ ಅಪಾಯದಿಂದ ಪಾರಾಗಿದ್ದಾರೆ.

ಗುರುವಾರ ರಾತ್ರಿ ಸುಮಾರು 8.30ರ ವೇಳೆಗೆ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶ ಮೂಲದ ಸಲೀಂ ಎಂಬವರು ಹೀಲಿಯಂ ಬಲೂನ್ ಮಾರಾಟ ಮಾಡುತ್ತಿದ್ದ ವೇಳೆ ಗ್ಯಾಸ್ ತುಂಬಿಸುವ ಸಂದರ್ಭದಲ್ಲೇ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಸಲೀಂ ಸ್ಥಳದಲ್ಲೇ ಮೃತಪಟ್ಟರು. ಘಟನೆಯಲ್ಲಿ ನಾಲ್ಕೈದು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ಸ್ಫೋಟದಲ್ಲಿ ಗಾಯಗೊಂಡಿದ್ದ ನಂಜನಗೂಡು ಮೂಲದ ಮಂಜುಳ ಅವರು ಶುಕ್ರವಾರ ಮಧ್ಯಾಹ್ನ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಮೈಸೂರಿನಲ್ಲಿ ಹೂವಿನ ವ್ಯಾಪಾರ ಮುಗಿಸಿಕೊಂಡು ಬಸ್ ಹತ್ತಲು ತೆರಳುತ್ತಿದ್ದ ಸಂದರ್ಭದಲ್ಲೇ ಅವರು ಸ್ಫೋಟಕ್ಕೆ ಸಿಲುಕಿದ್ದರು ಎಂದು ತಿಳಿದುಬಂದಿದೆ.

ಸ್ಫೋಟದಲ್ಲಿ ಮೃತಪಟ್ಟ ಸಲೀಂ ಸುಮಾರು 15 ದಿನಗಳ ಹಿಂದಷ್ಟೇ ಮೈಸೂರಿಗೆ ಬಂದಿದ್ದು, ಲಷ್ಕರ್ ಮೊಹಲ್ಲಾದ ಶರೀಫ್ ಲಾಡ್ಜ್‌ನಲ್ಲಿ ವಾಸವಾಗಿದ್ದರು. ಸಾಮಾನ್ಯವಾಗಿ ಮೂವರು ಸ್ನೇಹಿತರೊಂದಿಗೆ ಬಲೂನ್ ಮಾರಾಟ ಮಾಡುತ್ತಿದ್ದ ಅವರು, ಘಟನೆ ನಡೆದ ರಾತ್ರಿ ಒಬ್ಬರೇ ಇದ್ದುದು ತನಿಖಾಧಿಕಾರಿಗಳ ಗಮನ ಸೆಳೆದಿದೆ.

ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು NIAಗೂ ಮಾಹಿತಿ ನೀಡಲಾಗಿದೆ. ಸಲೀಂ ಜತೆಗಿದ್ದ 5 ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0