ವಾರ್ತಾ ಇಲಾಖೆ ನೂತನ ಆಯುಕ್ತರಾಗಿ ಡಿಐಜಿ ಎಂ.ಎನ್. ಅನುಚೇತ್ ನೇಮಕ

Jun 25, 2026 - 09:29
 0  201
ವಾರ್ತಾ ಇಲಾಖೆ ನೂತನ ಆಯುಕ್ತರಾಗಿ ಡಿಐಜಿ ಎಂ.ಎನ್. ಅನುಚೇತ್ ನೇಮಕ

ಬೆಂಗಳೂರು, ಜೂ. 26: ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರನ್ನಾಗಿ ಹಿರಿಯ ಐಪಿಎಸ್ ಅಧಿಕಾರಿ ಡಿಐಜಿ ಎಂ.ಎನ್. ಅನುಚೇತ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ಅವರು ಇಂದು ಗುರುವಾರ ಅಧಿಕಾರ ಸ್ವೀಕರಿಸಲಿದ್ದಾರೆ.

ವಾರ್ತಾ ಇಲಾಖೆಯ ಜೊತೆಗೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಆಯುಕ್ತರ ಹೆಚ್ಚುವರಿ ಪ್ರಭಾರವನ್ನೂ ಅವರಿಗೆ ವಹಿಸಿ ಸರ್ಕಾರ ಆದೇಶ ಹೊರಡಿಸಿದೆ.

ಕೋಲಾರ ಜಿಲ್ಲೆಯವರಾದ ಅನುಚೇತ್ ಅವರು ಬೆಂಗಳೂರಿನ ಆರ್.ವಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ 2006ರಲ್ಲಿ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 2009ರ ಬ್ಯಾಚ್‌ನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಪಿಎಸ್‌ಗೆ ಆಯ್ಕೆಯಾಗಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಅವರು ಕೊಡಗು ಜಿಲ್ಲಾ ಎಸ್‌ಪಿಯಾಗಿ 2011-12ರ ಅವಧಿಯಲ್ಲಿ ನೀಡಿದ ಸೇವೆ ಜನಮಾನಸದಲ್ಲಿ ಉಳಿದಿದೆ. ಕೊಲೆ, ದರೋಡೆ, ಮಾದಕ ವಸ್ತು ಸಾಗಾಟ ಪ್ರಕರಣಗಳನ್ನು ಭೇದಿಸಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದರು. "ಖಡಕ್ ಪೊಲೀಸ್ ಅಧಿಕಾರಿ" ಎಂದು ಗುರುತಿಸಿಕೊಂಡಿದ್ದರು.

ಕೊಡಗಿನಲ್ಲಿ ಪತ್ರಕರ್ತರ ಹೆಸರು ದುರ್ಬಳಕೆಯಾಗುವುದನ್ನು ತಡೆಯಲು ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯರ ವಾಹನಗಳಿಗೆ ಪೊಲೀಸ್ ಇಲಾಖೆಯಿಂದ 'MEDIA' ಸ್ಟಿಕ್ಕರ್ ವಿತರಿಸಿದ್ದರು. ಪ್ರವಾಸಿ ಹಾಗೂ ಬಾಡಿಗೆ ವಾಹನಗಳಲ್ಲಿ 'PRESS' ಸ್ಟಿಕ್ಕರ್ ಅಂಟಿಸಿ ಅಕ್ರಮ ಚಟುವಟಿಕೆ ನಡೆಯುತ್ತಿದ್ದನ್ನು ಗಮನಿಸಿ ಈ ಕ್ರಮ ಕೈಗೊಂಡಿದ್ದರು.

ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಗಾಗಿ ರಚಿಸಲಾದ ಎಸ್‌ಐಟಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ಆರೋಪಿಗಳ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0