ಮಲ್ಮ ಬೆಟ್ಟದ ಕೃಷಿ ಭೂಮಿ ರಕ್ಷಣೆಗೆ ಆಗ್ರಹ: ಗ್ರಾಮಸ್ಥರ ಹೋರಾಟಕ್ಕೆ ಪ್ರಸನ್ನ ಎಡಿಕೇರಿ ಬೆಂಬಲ

Jun 21, 2026 - 10:52
 0  139
ಮಲ್ಮ ಬೆಟ್ಟದ ಕೃಷಿ ಭೂಮಿ ರಕ್ಷಣೆಗೆ ಆಗ್ರಹ: ಗ್ರಾಮಸ್ಥರ ಹೋರಾಟಕ್ಕೆ ಪ್ರಸನ್ನ ಎಡಿಕೇರಿ ಬೆಂಬಲ

ಮಡಿಕೇರಿ, ಜೂನ್ 20: ಕೊಡಗಿನ ಆರಾಧ್ಯ ದೈವ ಶ್ರೀ ಪಾಡಿಗುತ್ತಪ್ಪ ದೇವಸ್ಥಾನದ ಸನ್ನಿಹಿತದ ಮಲ್ಮ ಬೆಟ್ಟಕ್ಕೆ ಹೊಂದಿಕೊಂಡಿರುವ ಸ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಸುವ ಪ್ರಯತ್ನವನ್ನು ವಿರೋಧಿಸಿ ನೆಲಜಿ ಗ್ರಾಮಸ್ಥರು ವಿಶೇಷ ಗ್ರಾಮಸಭೆ ನಡೆಸಿದ್ದಾರೆ. ಈ ಹೋರಾಟಕ್ಕೆ ಸಮಾಜ ಸೇವಕ ಪ್ರಸನ್ನ ಎಡಿಕೇರಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಪ್ರಸನ್ನ ಎಡಿಕೇರಿ ಅವರು ನೀಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಈ ಪ್ರದೇಶವು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಪರಿಸರದ ದೃಷ್ಟಿಯಿಂದ ಮಹತ್ವದ್ದಾಗಿದೆ. ಪ್ರಕೃತಿ ಸೌಂದರ್ಯ, ಪರಿಸರ ಸಮತೋಲನ ಹಾಗೂ ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ಭೂಮಿಯ ಬಳಕೆಯ ಕುರಿತು ಸಂಬಂಧಿತ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಜೂನ್ 20ರಂದು ನಲಜಿ ಗ್ರಾಮಸ್ಥರ ಸಹಯೋಗದಲ್ಲಿ ಬಳ್ಳಮಾವತಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಲಜಿ, ಬಳ್ಳಮಾವತಿ, ಪುಲಿಕೋಟು, ಕುಂಜಿಲ, ಕಕ್ಕಬೆ, ಪೇರೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಪಕ್ಷಭೇದ ಮರೆತು ವಿಶೇಷ ಗ್ರಾಮಸಭೆಯಲ್ಲಿ ಭಾಗವಹಿಸಿ ವಿರೋಧ ವ್ಯಕ್ತಪಡಿಸಿದ್ದು ಶ್ಲಾಘನೀಯ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಸುವ ಪ್ರಯತ್ನವನ್ನು ಗ್ರಾಮಸ್ಥರು ತೀವ್ರವಾಗಿ ವಿರೋಧಿಸಿದ್ದು, ಸರ್ಕಾರದ ನೋಡಲ್ ಅಧಿಕಾರಿ, ಪಿಡಿಒ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಆತಂಕ ಮನವರಿಕೆ ಮಾಡಿಕೊಡಲಾಗಿದೆ. ಈ ಭಾಗದ ಧಾರ್ಮಿಕ-ಸಾಂಸ್ಕೃತಿಕ ಹಾಗೂ ಪರಿಸರ ಮಹತ್ವ ಗಮನದಲ್ಲಿಟ್ಟುಕೊಂಡು ಯಾವುದೇ ಅನಪೇಕ್ಷಿತ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಸರ್ಕಾರ ಸೂಕ್ತವಾಗಿ ಸ್ಪಂದಿಸದಿದ್ದಲ್ಲಿ ಮಲ್ಮದಿಂದ ಮಡಿಕೇರಿವರೆಗೆ ಪಾದಯಾತ್ರೆ, ಅಹೋರಾತ್ರಿ ಧರಣಿ ಸೇರಿದಂತೆ ಕಾನೂನುಬದ್ಧ ಹೋರಾಟದ ವಿವಿಧ ರೂಪಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಪ್ರಸನ್ನ ಎಡಿಕೇರಿ ತಿಳಿಸಿದ್ದಾರೆ. ಕೊಡಗು ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿರುವ ಕೊಡಗಿನವರ ಸಹಕಾರದೊಂದಿಗೆ ಹೋರಾಟ ಮುಂದುವರಿಸಲಾಗುವುದು ಎಂದಿದ್ದಾರೆ.

"ಕೊಡಗಿನ ಪರಿಸರ, ಪ್ರಕೃತಿ, ಸಂಸ್ಕೃತಿ ಮತ್ತು ಪರಂಪರೆಗೆ ಹಾನಿಯಾಗದಂತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಜಾತಿ, ಪಕ್ಷ ಭೇದ ಮರೆತು ನಮ್ಮ ನಾಡಿನ ಉಳಿವಿಗಾಗಿ ಶ್ರಮಿಸಬೇಕು" ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0