ದೇವನಹಳ್ಳಿ | ಒಂದೇ ಕುಟುಂಬದ ನಾಲ್ವರಿಂದ ಸಾಮೂಹಿಕ ಆತ್ಮಹತ್ಯೆ ಯತ್ನ; ಇಬ್ಬರ ಮೃತ್ಯು, ಇಬ್ಬರ ಸ್ಥಿತಿ ಗಂಭೀರ : ಸಾಲದ ಬಾಧೆ ಶಂಕೆ

Oct 31, 2025 - 16:20
 0  1.1k
ದೇವನಹಳ್ಳಿ | ಒಂದೇ ಕುಟುಂಬದ ನಾಲ್ವರಿಂದ ಸಾಮೂಹಿಕ ಆತ್ಮಹತ್ಯೆ ಯತ್ನ; ಇಬ್ಬರ ಮೃತ್ಯು, ಇಬ್ಬರ ಸ್ಥಿತಿ ಗಂಭೀರ :  ಸಾಲದ ಬಾಧೆ ಶಂಕೆ

ದೇವನಹಳ್ಳಿ, ಅ. 31: ದೇವನಹಳ್ಳಿ ತಾಲೂಕಿನ ಹೆಗ್ಗನಹಳ್ಳಿಯಲ್ಲಿ ಪೌರೋಹಿತ್ಯ ವೃತ್ತಿ ಮಾಡುತ್ತಿದ್ದ ಕುಟುಂಬವೊಂದು ಗುರುವಾರ ಸಂಜೆ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ತಂದೆ ಮತ್ತು ಮಗ ಮೃತಪಟ್ಟಿದ್ದು, ತಾಯಿ ಹಾಗೂ ಮತ್ತೊಬ್ಬ ಮಗ ಅತೀವ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೃತರನ್ನು ಹೆಗ್ಗನಹಳ್ಳಿಯ ನಿವಾಸಿ ಕುಮಾರಪ್ಪ (60) ಹಾಗೂ ಹಿರಿಯ ಪುತ್ರ ಅರುಣ್ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡಿರುವ ಪತ್ನಿ ರಮಾ (55) ಮತ್ತು ಕಿರಿಯ ಮಗ ಅಕ್ಷಯ್ ಅವರನ್ನು ಸ್ಥಳೀಯರು ಆ್ಯಂಬುಲೆನ್ಸ್‌ನಲ್ಲಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರ ಸ್ಥಿತಿಯೂ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕುಟುಂಬದ ನಾಲ್ವರೂ ಕ್ರಿಮಿನಾಶಕ ಸೇವಿಸಿದ್ದು, ನಂತರ ಹಿರಿಯ ಪುತ್ರ ಅರುಣ್ ನೇಣಿಗೆ ಶರಣಾಗಿದ್ದಾನೆ. ಮನೆಯ ಒಳಗೆ ಮದ್ಯದ ಬಾಟಲಿ ಹಾಗೂ ಕ್ರಿಮಿನಾಶಕ ಪತ್ತೆಯಾಗಿವೆ.

ಸಾಲದ ಬಾಧೆ ಅಥವಾ ಇತರ ವೈಯಕ್ತಿಕ ಕಾರಣಗಳಿಂದ ಕುಟುಂಬ ಆತ್ಮಹತ್ಯೆ ಯತ್ನಕ್ಕೆ ಶರಣಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನೆ ಕುರಿತು ಮಾಹಿತಿ ದೊರೆತ ತಕ್ಷಣ ದೇವನಹಳ್ಳಿ ಉಪವಿಭಾಗದ ಎಸಿಪಿ ಹಾಗೂ ಚಿಕ್ಕಜಾಲ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತದೇಹಗಳನ್ನು ಶವಪರೀಕ್ಷೆಗಾಗಿ ಯಲಹಂಕ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

What's Your Reaction?

Like Like 1
Dislike Dislike 1
Love Love 0
Funny Funny 0
Angry Angry 0
Sad Sad 2
Wow Wow 0