State News

ಧರ್ಮಸ್ಥಳ ಪ್ರಕರಣ: ಶ್ಯೂರಿಟಿ ಸಲ್ಲಿಕೆ, ಮಾಸ್ಕ್‌ ಮ್ಯಾನ್‌ ಚಿನ್ನಯ್ಯಗೆ ಬಿಡುಗಡೆ

admincoorgdaily

ಧರ್ಮಸ್ಥಳ ಪ್ರಕರಣ: ಶ್ಯೂರಿಟಿ ಸಲ್ಲಿಕೆ, ಮಾಸ್ಕ್‌ ಮ್ಯಾನ್‌ ಚಿನ್ನಯ್ಯಗೆ ಬಿಡುಗಡೆ

ಮಂಗಳೂರು, ಡಿ. 17: ಧರ್ಮಸ್ಥಳ ಸಮೂಹ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿ ಚರ್ಚೆಗೆ ಗ್ರಾಸವಾಗಿದ್ದ ‘ಮಾಸ್ಕ್‌ ಮ್ಯಾನ್‌’ ಎಂದು ಗುರುತಿಸಿಕೊಂಡ ಸಿ.ಎನ್. ಚಿನ್ನಯ್ಯಗೆ ಶ್ಯೂರಿಟಿ ಸಲ್ಲಿಕೆಯಾದ ಬಳಿಕ ಜೈಲಿನಿಂದ ಬಿಡುಗಡೆಯ ಭಾಗ್ಯ ದೊರೆತಿದೆ. ಜಾಮೀನು ಮಂಜೂರಾಗಿದ್ದರೂ ಶ್ಯೂರಿಟಿ ಕೊರತೆಯಿಂದಾಗಿ ಶಿವಮೊಗ್ಗ ಜೈಲಿನಲ್ಲಿಯೇ ಉಳಿದಿದ್ದ ಅವರು, 23 ದಿನಗಳ ಬಳಿಕ ಬಿಡುಗಡೆಗೊಳ್ಳಲಿದ್ದಾರೆ.

ಬೆಳ್ತಂಗಡಿ ನ್ಯಾಯಾಲಯ ವಿಧಿಸಿದ್ದ ಷರತ್ತುಗಳಂತೆ ಒಂದು ಲಕ್ಷ ರೂ. ಬಾಂಡ್‌ ಹಾಗೂ ಇಬ್ಬರು ಜಾಮೀನುದಾರರ ಶ್ಯೂರಿಟಿಯನ್ನು ಚಿನ್ನಯ್ಯ ಅವರ ಪತ್ನಿ ಮಲ್ಲಿಕಾ ಸಲ್ಲಿಸಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯವು ಡಿಸೆಂಬರ್‌ 17ರಂದು ಬಿಡುಗಡೆಗೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಮಲ್ಲಿಕಾ ಹಾಗೂ ಚಿನ್ನಯ್ಯ ಅವರ ಸಹೋದರಿ ರತ್ನ ಅವರು ನ್ಯಾಯಾಲಯದ ಆದೇಶದೊಂದಿಗೆ ಶಿವಮೊಗ್ಗ ಜೈಲಿಗೆ ತೆರಳಿದ್ದಾರೆ.

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಅನಾಮಿಕ ದೂರುದಾರರಾಗಿದ್ದ ಚಿನ್ನಯ್ಯ ಅವರನ್ನು ಆಗಸ್ಟ್‌ 23ರಂದು ಬಂಧಿಸಲಾಗಿತ್ತು. ಸೆಪ್ಟೆಂಬರ್‌ 6ರಂದು ನ್ಯಾಯಾಂಗ ಬಂಧನ ವಿಧಿಸಿ ಶಿವಮೊಗ್ಗ ಜೈಲಿಗೆ ಸ್ಥಳಾಂತರಿಸಲಾಗಿತ್ತು. ನವೆಂಬರ್‌ 24ರಂದು ನ್ಯಾಯಾಲಯವು 1 ಲಕ್ಷ ರೂ. ಬಾಂಡ್‌, ಇಬ್ಬರ ಶ್ಯೂರಿಟಿ ಸೇರಿ 12 ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ಶ್ಯೂರಿಟಿ ಒದಗದ ಕಾರಣ ಅವರು ಜೈಲಿನಲ್ಲಿಯೇ ಮುಂದುವರಿಯಬೇಕಾಯಿತು.