State News

ಧರ್ಮಸ್ಥಳ ಪ್ರಕರಣ | ಬುರುಡೆ ತಂದವರಿಗೇ ‘ಬುರುಡೆ ಕಾಟ' ಕೊಟ್ಟಿತ್ತು: SIT ವರದಿಯಲ್ಲಿ ಅಚ್ಚರಿಯ ವಿವರಗಳು ಬಹಿರಂಗ

admincoorgdaily

Photo credit: TV09 (ಫೋಟೋ:ಸುಜಾತ ಭಟ್ ಮತ್ತು ಜಯಂತ್)

ಮಂಗಳೂರು, ಡಿ. 29: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಿ ಅಪಪ್ರಚಾರ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಕೋರ್ಟ್‌ಗೆ ಸಲ್ಲಿಸಿರುವ ಪ್ರಾಥಮಿಕ ವರದಿ ಹಲವು ಅಚ್ಚರಿ ಮೂಡಿಸುವ ಅಂಶಗಳನ್ನು ಬಹಿರಂಗಪಡಿಸಿದೆ. ಪ್ರಕರಣದಲ್ಲಿ ಬಳಸಲಾಗಿದ್ದ ‘ಬುರುಡೆ’ಯೇ ಆರೋಪಿಗಳಲ್ಲಿ ಒಬ್ಬನಿಗೆ ಮಾನಸಿಕ ಆತಂಕ ಉಂಟುಮಾಡಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಎಸ್‌ಐಟಿ ವರದಿ ಪ್ರಕಾರ, ಆರೋಪಿಗಳ ಪೈಕಿ ಜಯಂತ್ ಬುರುಡೆಯನ್ನು ರೈಲಿನ ಮೂಲಕ ದೆಹಲಿಗೆ ತೆಗೆದುಕೊಂಡು ಹೋಗಿದ್ದರು. ಇತರ ಆರೋಪಿಗಳಾದ ಚಿನ್ನಯ್ಯ, ಗಿರೀಶ್ ಮಟ್ಟಣ್ಣನವರ್ ಹಾಗೂ ಸುಜಾತಾ ವಿಮಾನದ ಮೂಲಕ ದೆಹಲಿಗೆ ತೆರಳಿದ್ದರು. ದೆಹಲಿಯಲ್ಲಿ ಒಂದೇ ಕೊಠಡಿಯಲ್ಲಿ ಜಯಂತ್, ಚಿನ್ನಯ್ಯ ಮತ್ತು ಮಟ್ಟಣ್ಣನವರ್ ವಾಸ್ತವ್ಯ ಹೂಡಿದ್ದ ವೇಳೆ ಜಯಂತ್‌ಗೆ ಭಯಾನಕ ಕನಸು ಬಿದ್ದು ಆತ ಕಿರುಚಿಕೊಂಡಿದ್ದಾನೆ. ಈ ಘಟನೆಯಿಂದ ಆತ ಆತಂಕಗೊಂಡು, ಬುರುಡೆಯನ್ನು ದೆಹಲಿಯಲ್ಲೇ ಬಿಟ್ಟು ಬೆಂಗಳೂರಿಗೆ ವಾಪಸ್ ಆಗಿದ್ದಾನೆ ಎಂದು ವರದಿಯಲ್ಲಿ ಹೇಳಲಾಗಿದೆ.

ಆದರೆ, ಬಳಿಕ ಮತ್ತೆ ದೆಹಲಿಗೆ ತೆರಳಿದ ಜಯಂತ್, ಅಲ್ಲಿದ್ದ ಬುರುಡೆಯನ್ನು ರೈಲಿನ ಮೂಲಕ ನೇರವಾಗಿ ಮಂಗಳೂರಿಗೆ ತಂದು ತಿಮರೋಡಿ ಮನೆಯಲ್ಲಿ ಇರಿಸಿದ್ದಾನೆ ಎಂಬ ಮಾಹಿತಿಯನ್ನೂ ಎಸ್‌ಐಟಿ ವರದಿಯಲ್ಲಿ ದಾಖಲಿಸಲಾಗಿದೆ.

ಪ್ರಕರಣದ ಮತ್ತೊಂದು ಗಮನಾರ್ಹ ಅಂಶವಾಗಿ, ದೆಹಲಿಯ ವಿಠ್ಠಲ ಮಂದಿರದಲ್ಲಿ ಆರೋಪಿಗಳು ವಾಸ್ತವ್ಯ ಹೂಡಿದ್ದ ವೇಳೆ ಸುಜಾತಾ ಪ್ರತ್ಯೇಕ ಕೊಠಡಿಯಲ್ಲಿ ಇದ್ದರು. ಆ ಕೊಠಡಿಯ ಮಂಚದ ಕೆಳಗೆ ಜಯಂತ್ ಬುರುಡೆಯಿದ್ದ ಪೆಟ್ಟಿಗೆಯನ್ನು ಇಟ್ಟಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪೆಟ್ಟಿಗೆಯಲ್ಲಿ ಏನಿದೆ ಎಂದು ಸುಜಾತಾ ಪ್ರಶ್ನಿಸಿದಾಗ, ‘ಏನೂ ಇಲ್ಲ’ ಎಂದು ಜಯಂತ್ ಉತ್ತರಿಸಿದ್ದಾನೆ. 

ಈ ಹಿನ್ನೆಲೆಯಲ್ಲಿ, ಸುಜಾತಾಗೆ ಅರಿವಿಲ್ಲದೇ, ಅವರು ಮಲಗಿದ್ದ ಮಂಚದ ಕೆಳಗೇ ಬುರುಡೆ ಇದ್ದಿತು. ಅದೇ ರಾತ್ರಿ ಜಯಂತ್‌ಗೆ ಮತ್ತೆ ಭಯಾನಕ ಕನಸು ಬಿದ್ದಿತ್ತೆಂದು ಎಸ್‌ಐಟಿ ತನ್ನ ಪ್ರಾಥಮಿಕ ವರದಿಯಲ್ಲಿ ಕೋರ್ಟ್‌ಗೆ ತಿಳಿಸಿದೆ.