ಕೇರಳದ ಟೆಕ್ಕಿ ಶರಣ್ಯ ದಾರಿ ತಪ್ಪಿದ್ದೋ? ಪಬ್ಲಿಸಿಟಿ ಗಿಮಿಕ್ಕೋ! ; ಶರಣ್ಯ ನಾಪತ್ತೆ ಪ್ರಕರಣದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕಾವೇರಿದ ಚರ್ಚೆ
ಮಡಿಕೇರಿ:ದೇಶಾದ್ಯಂತ ಕಳೆದ ಐದು ದಿನಗಳ ಕಾಲ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸಮೀಪದ ಕಕ್ಕಬ್ಬೆಯ ತಡಿಯಂಡಮೋಳ್ ಬೆಟ್ಟ ಸುದ್ದಿಯಲ್ಲಿತ್ತು. ಕಾರಣವೇನೆಂದರೆ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್ ಗೆ ಬಂದಿದ್ದ ಕೇರಳದ ಟೆಕ್ಕಿ ಯುವತಿ ಶರಣ್ಯ ನಾಪತ್ತೆಯಾಗಿದ್ದಳು. ನಾಲ್ಕು ದಿನಗಳ ಬಳಿಕ ಶರಣ್ಯಾಳನ್ನು ಪತ್ತೆಹಚ್ಚುವಲ್ಲಿ ಪೊಲೀಸ್ ಇಲಾಖೆ,ಅರಣ್ಯ ಇಲಾಖೆ,ಸ್ಥಳೀಯ ಕುಡಿಯ ಜನಾಂಗದವರು ಯಶಸ್ಸು ಕಂಡಿದ್ದರು.
ನಾಲ್ಕು ದಿನಗಳ ಕಾಲ ದಟ್ಟಾರಣ್ಯದಲ್ಲಿ ಒಪ್ಪೊತ್ತಿನ ಆಹಾರ ಕೂಡ ಇಲ್ಲದೆ ಶರಣ್ಯ ದಿನ ಕಳೆದದ್ದು ಸಾಹಸವೇ ಸರಿ. ಇದೀಗ ಒಂದೆಡೆ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ದಾರಿ ತಪ್ಪಿದ್ದ ಶರಣ್ಯಳ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರ ಒಂದೆಡೆಯಾದರೆ ಅನುಮಾನಗಳ ವ್ಯಕ್ತವಾಗುತ್ತಿದೆ.
ನಾಲ್ಕು ದಿನಗಳ ಬರೀ ನೀರು ಕುಡಿದು ಬದುಕುಳಿಯಲು ಸಾಧ್ಯವೇ! ಅದಲ್ಲದೇ ನಾಲ್ಕು ದಿನ ದಟ್ಟಾರಣ್ಯದಲ್ಲಿ ಉಳಿದಿದ್ದ ಶರಣ್ಯಳ ಮುಖಭಾವದಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ!ಮತ್ತೊಂದೆಡೆ ಮಳೆಯ ನಡುವೆಯೂ ಶರಣ್ಯಾಳ ಬಟ್ಟೆಯಲ್ಲಿ ಯಾವುದೇ ರೀತಿಯ ಕೆಸರಾಗಿಲ್ಲ.ಈಗೇ ನಾನಾ ಪ್ರಶ್ನೆಗಳು,ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ.
ಶರಣ್ಯ ದಾರಿ ತಪ್ಪಿದ್ದೋ! ತಪ್ಪಿಸಿದ್ದೋ!ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಶರಣ್ಯಳನ್ನು ತನಿಖೆಗೆ ಒಳಪಡಿಸಬೇಕೆಂದು ಕೊಡಗಿನ ಸಾಮಾಜಿಕ ಕಾರ್ಯಕರ್ತ ಪ್ರತೀಕ್ ಪೊನ್ನಣ್ಣ ಒತ್ತಾಯಿಸಿದ್ದಾರೆ.
ತಡಿಯಂಡಮೋಳ್ ಟ್ರಕ್ಕಿಂಗ್ ತೆರಳಿ ನಾಪತ್ತೆಯಾಗಿದ್ದ ಶರಣ್ಯ ತೀವ್ರ ಶೋಧ ಕಾರ್ಯ ಬಳಿಕ ಪತ್ತೆಯಾದ ನಂತರ ಹಲವರಲ್ಲಿ ಹಲವು ಸಂಶಯಗಳು ಮೂಡಿದ್ದು ಕೊಡಗು ಮಾತ್ರವಲ್ಲದೆ ನೆರೆಯ ಕೇರಳದಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಆಹಾರವಿಲ್ಲದೆ ಕಾಡಿನಲ್ಲಿ ಕಳೆದ ಆತಂಕ, ಬಳಲಿಕೆ ಮುಖದಲ್ಲಿಲ್ಲ, ಟ್ರಕ್ಕಿಂಗ್ ಅನುಭವ ಹೊಂದಿರುವ ಈ ಮಹಿಳೆ ಕನಿಷ್ಠ ಅಗತ್ಯ ಮುಂಜಾಗ್ರತಾ ಸಾಧನಗಳನ್ನು ಕೊಂಡೊಯ್ಯದಿರುವುದು, ರಸ್ತೆ ಪತ್ತೆಹಚ್ಚಲು ಪ್ರಯತ್ನವನ್ನೇ ಮಾಡಿಲ್ಲವಾ ಎಂಬಿತ್ಯಾದಿ ಸಂಶಯಗಳು ಚರ್ಚೆಗೆ ಒಳಪಟ್ಟಿವೆ.
ಡ್ರೋನ್ ಗಳು, ಶ್ವಾನದಳ ದಿಂದಲೂ ಕೂಡ ಪತ್ತೆಹಚ್ಚಲು ಸಾಧ್ಯವಾಗದ ರೀತಿಯಲ್ಲಿ ಕಣ್ಮರೆಯಾದ ಪರಿ ಚರ್ಚೆಗೆ ಎಡೆಮಾಡಿದೆ. ಟ್ರಕ್ಕಿಂಗ್ ಪ್ರಿಯರು, ಪಕ್ಷಿತಜ್ಞರ ಶರಣ್ಯ ಕಣ್ಮರೆ ಪ್ರಕರಣದ ಬಗ್ಗೆ ಹಲವು ಕುತೂಹಲಗಳನ್ನು ವ್ಯಕ್ತಪಡಿಸುತ್ತಿದ್ದಾರೆ.