ಹಣ ನೀಡದವರನ್ನು ಮಂಗಳಮುಖಿಯರು ಮಾಡಿದ್ದೇನು ಗೊತ್ತಾ!

Dec 28, 2025 - 11:43
 0  1.9k
ಹಣ ನೀಡದವರನ್ನು ಮಂಗಳಮುಖಿಯರು ಮಾಡಿದ್ದೇನು ಗೊತ್ತಾ!
Photo credit:KP

ಬೆಂಗಳೂರು: ಹಣ ನೀಡಲು ನಿರಾಕರಿಸಿದ ಸಾರ್ವಜನಿಕರೊಂದಿಗೆ ನಡುರಸ್ತೆಯಲ್ಲೇ ಅಸಭ್ಯವಾಗಿ ವರ್ತಿಸಿದ ಆರೋಪದಡಿ ಮಂಗಳಮುಖಿಯರ ಗುಂಪಿನ ವಿರುದ್ಧ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಬಿವಿಕೆ ಅಯ್ಯಂಗಾರ್ ಮುಖ್ಯರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದೆ. ರಸ್ತೆ ಮೂಲಕ ಸಂಚರಿಸುತ್ತಿದ್ದ ಸಾರ್ವಜನಿಕರನ್ನು ನಾಲ್ಕೈದು ಮಂದಿ ಮಂಗಳಮುಖಿಯರು ತಡೆದು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡಲು ನಿರಾಕರಿಸಿದಾಗ ಕೈತಟ್ಟಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾ ಸಾರ್ವಜನಿಕರ ಎದುರು ಅಸಭ್ಯವಾಗಿ ವರ್ತಿಸಿರುವುದಾಗಿ ದೂರಲಾಗಿದೆ.

ಘಟನೆಯ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‌ ಫೋನ್‌ಗಳಲ್ಲಿ ಸೆರೆ ಹಿಡಿದಿದ್ದು, ಸಮೀಪದ ಅಂಗಡಿಯೊಂದರಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿಯೂ ದಾಖಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಬಿವಿಕೆ ಅಯ್ಯಂಗಾರ್ ರಸ್ತೆ, ಚಿಕ್ಕಪೇಟೆ, ಕಾಟನ್‌ಪೇಟೆ ಹಾಗೂ ಕೆ.ಆರ್. ಮಾರುಕಟ್ಟೆ ಸುತ್ತಮುತ್ತ ಇದೇ ರೀತಿಯ ಘಟನೆಗಳು ಮರುಮರು ನಡೆಯುತ್ತಿವೆ ಎಂದು ಸಾರ್ವಜನಿಕರು ಮತ್ತು ವ್ಯಾಪಾರಿಗಳು ದೂರಿದ್ದಾರೆ. ಕೇಳಿದಷ್ಟು ಹಣ ನೀಡದಿದ್ದರೆ ಅಸಭ್ಯ ವರ್ತನೆ ತೋರಿಸುವುದು, ಪರ್ಸ್ ಕಸಿದುಕೊಳ್ಳುವಂತಹ ಕೃತ್ಯಗಳಿಂದ ವ್ಯಾಪಾರ ಹಾಗೂ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಗೃಹಪ್ರವೇಶ, ಮದುವೆ ಮನೆಗಳು ಹಾಗೂ ಕಲ್ಯಾಣ ಮಂಟಪಗಳಿಗೆ ಮಂಗಳಮುಖಿಯರ ಸೋಗಿನಲ್ಲಿರುವ ಗುಂಪುಗಳು ನುಗ್ಗಿ ಐದು ಸಾವಿರದಿಂದ ಹತ್ತು ಸಾವಿರ ರೂಪಾಯಿ ವರೆಗೆ ಹಣಕ್ಕೆ ಒತ್ತಡ ಹೇರುತ್ತಿವೆ ಎಂಬ ಆರೋಪವೂ ಕೇಳಿಬಂದಿದೆ. ಕೇಳಿದಷ್ಟು ಹಣ ನೀಡದಿದ್ದರೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಕನಿಷ್ಠ ಮೂರು ಸಾವಿರ ರೂಪಾಯಿ ಪಡೆದು ಸ್ಥಳದಿಂದ ತೆರಳುತ್ತಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

What's Your Reaction?

Like Like 2
Dislike Dislike 0
Love Love 1
Funny Funny 0
Angry Angry 1
Sad Sad 4
Wow Wow 0