ಪ್ರೀತಿ,ಮದುವೆ ನೆಪದಲ್ಲಿ ಯುವಕ ಮಾಡಿದ್ದೇನು ಗೊತ್ತಾ?

Dec 28, 2025 - 14:16
 0  2.6k
ಪ್ರೀತಿ,ಮದುವೆ ನೆಪದಲ್ಲಿ ಯುವಕ ಮಾಡಿದ್ದೇನು ಗೊತ್ತಾ?
Photo credit: TV09

ನೆಲಮಂಗಲ, ಡಿ. 28: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗಿನ ಸಂಬಂಧವನ್ನು ದುರುಪಯೋಗಪಡಿಸಿಕೊಂಡು ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನಾಭರಣ ವಂಚಿಸಿದ್ದಲ್ಲದೆ, ಆಕೆಯ ಅಪ್ರಾಪ್ತ ಸಹೋದರಿಯ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದಲ್ಲಿ ಶುಭಾಂಶು ಶುಕ್ಲಾ (27) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿ ಮೊದಲು ಅಪ್ರಾಪ್ತ ಬಾಲಕಿಯ ಪರಿಚಯ ಮಾಡಿಕೊಂಡು ಕುಟುಂಬದ ನಂಬಿಕೆ ಗಳಿಸಿದ್ದ. ನಂತರ ಆಕೆಯ ಅಕ್ಕನೊಂದಿಗೆ ಪ್ರೀತಿಯ ನೆಪದಲ್ಲಿ ಸಂಬಂಧ ಬೆಳೆಸಿಕೊಂಡು, ಮುಂಬೈನಲ್ಲಿ ಉದ್ಯೋಗ ಸಿಕ್ಕಿದೆ ಎಂದು ಹೇಳಿ ಯುವತಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಇಬ್ಬರೂ ಲಿವ್–ಇನ್ ಸಂಬಂಧದಲ್ಲಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಂಬಂಧದ ಅವಧಿಯಲ್ಲಿ ಆರೋಪಿ ಈಗಾಗಲೇ ವಿವಾಹಿತನಾಗಿರುವ ವಿಚಾರ ಸಂತ್ರಸ್ತೆಗೆ ತಿಳಿದುಬಂದಿದೆ. ಈ ಕುರಿತು ಪ್ರಶ್ನಿಸಿದಾಗ ವಿಚ್ಛೇದನ ಪಡೆದು ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಆರೋಪಿ ಪತ್ನಿಯೂ ವಿಚ್ಛೇದನಕ್ಕೆ ಸಮ್ಮತಿಸುವುದಾಗಿ ಹೇಳಿದ್ದರಿಂದ ಯುವತಿ ಸಂಬಂಧ ಮುಂದುವರಿಸಿದ್ದಾಳೆ ಎನ್ನಲಾಗಿದೆ.

ಇದಾದ ಬಳಿಕ ಆರೋಪಿ ಮತ್ತೊಬ್ಬ ಅಪ್ರಾಪ್ತೆಯೊಂದಿಗೆ ಸಹ ಇದೇ ರೀತಿಯ ವರ್ತನೆ ನಡೆಸುತ್ತಿರುವುದು ತಿಳಿದುಬಂದಾಗ, ವಿಚಾರಿಸಿದ ಸಂತ್ರಸ್ತೆಯ ಮೇಲೆ ಮಾನಸಿಕ ಹಾಗೂ ದೈಹಿಕ ಹಿಂಸೆ ನಡೆಸಿದ್ದಾನೆ ಎಂದು ದೂರಲಾಗಿದೆ. ಈ ಅವಧಿಯಲ್ಲಿ ಯುವತಿಯ ಬಳಿ ಸುಮಾರು 37 ಲಕ್ಷ ರೂ. ಹಣ ಪಡೆದು, ಆಕೆಯ ಮನೆಯಿಂದ ಸುಮಾರು 559 ಗ್ರಾಂ ಚಿನ್ನಾಭರಣ ಕಳವು ಮಾಡಿರುವ ಆರೋಪವೂ ಇದೆ. ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಇದಲ್ಲದೆ, ಗ್ರೂಪ್ ಸ್ಟಡೀಸ್ ವೇಳೆ ಪರಿಚಯವಾಗಿದ್ದ ಅಪ್ರಾಪ್ತ ಬಾಲಕಿಯ ಮೇಲೂ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆಕೆ ನೀಡಿರುವ ದೂರಿನಲ್ಲಿ ಹೇಳಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

What's Your Reaction?

Like Like 2
Dislike Dislike 1
Love Love 3
Funny Funny 2
Angry Angry 2
Sad Sad 6
Wow Wow 0