ಡಾ.ಶಿವಕುಮಾರ ಸ್ವಾಮೀಜಿ ಜೀವನ ಶೈಲಿ ಜಗತ್ತಿಗೆ ಆದರ್ಶ; ಕುಶಾಲನಗರದಲ್ಲಿ ಸಿದ್ದಗಂಗಾ ಶ್ರೀಗಳ 119 ನೇ ಜಯಂತಿಯಲ್ಲಿ ಅರಮೇರಿ ಶ್ರೀಗಳ ಬಣ್ಣನೆ
ಕುಶಾಲನಗರ : 113 ವರ್ಷಗಳ ಸುಧೀರ್ಘ ಜೀವಿತಾವಧಿಯಲ್ಲಿ ತಮ್ಮ ಬದುಕನ್ನು ಸಮಾಜ ಸೇವೆಗೆ ಅರ್ಪಿಸುವ ಮೂಲಕ ಜಗತ್ತಿಗೆ ಆದರ್ಶರಾದವರು ಡಾ.ಶಿವಕುಮಾರ ಸ್ವಾಮೀಜಿ ಎಂದು ವಿರಾಜಪೇಟೆ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಬಣ್ಣಿಸಿದರು.
ಕುಶಾಲನಗರದ ಸಿದ್ದಗಂಗಾ ಭಕ್ತಮಂಡಳಿ ಹಾಗೂ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ನಗರದ ರಥಬೀದಿಯ ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಾ.ಶಿವಕುಮಾರ ಸ್ವಾಮೀಜಿ ಯವರ 119 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ಶ್ರೀಗಳು, ಇಡೀ ನಾಡು ಬರಗಾಲದಲ್ಲಿ ನಲುಗಿದ್ದ ಸಂದರ್ಭ ಅಲ್ಲಿ ಕಲಿಯುತ್ತಿದ್ದ ಬಡ ಮಕ್ಕಳ ಹೊಟ್ಟೆ ತುಂಬಿಸಲು ಹಳ್ಳಿ ಹಳ್ಳಿಗಳಿಗೆ ಪಾದಯಾತ್ರೆ ನಡೆಸಿ ಜೋಳಿಗೆ ಹಿಡಿದು ಭಿಕ್ಷಾಟನೆ ಮಾಡಿ ತಂದ ದವಸದಲ್ಲಿ ಮಕ್ಕಳ ಹೊಟ್ಟೆ ತುಂಬಿಸುತ್ತಿದ್ದರು.
ನರ್ಸರಿ ಯಿಂದ ಉನ್ನತ ಶಿಕ್ಷಣದವರೆಗೂ ನಾನಾ ಶಿಕ್ಷಣ ಸಂಸ್ಥೆಗಳನ್ನು ತೆರೆದ ಸಿದ್ದಗಂಗಾ ಶ್ರೀಗಳು, ಬಡ ಮಕ್ಕಳಿಗೆ ಉಚಿತವಾಗಿ ವೈದ್ಯಕೀಯ ಶಿಕ್ಷಣ ನೀಡಲು ಸಾಧ್ಯವಾಗದ ಕಾರಣ ವೈದ್ಯಕೀಯ ಕಾಲೇಜನ್ನು ಡಾ.ಶಿವಕುಮಾರ ಸ್ವಾಮೀಜಿ ಗಳು ತೆರೆದಿರಲಿಲ್ಲ. ಸಿದ್ದಗಂಗಾ ಮಠದಲ್ಲಿ ಉಚಿತ ಶಿಕ್ಷಣ ಹಾಗೂ ವಸತಿಗೆ ಪ್ರವೇಶ ಪಡೆಯಲು ಬಡ ಮಕ್ಕಳಿಗೆ ಕೇವಲ ಬಡತನ ಒಂದೇ ಮಾನದಂಡ ಎಂದು ಅರಮೇರಿ ಶ್ರೀಗಳು ಶ್ಲಾಘಿಸಿದರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಆಶೀರ್ವಚನ ದಲ್ಲಿ, 69 ವಸಂತಗಳ ಕಾಲ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾಗಿದ್ದ ಡಾ.ಶಿವಕುಮಾರ ಸ್ವಾಮೀಜಿ ಮಠದಲ್ಲಿ ನಿತ್ಯವೂ ಇರುವ 10 ಸಾವಿರ ಮಕ್ಕಳ ಹೃದಯದಲ್ಲಿ ದೇವರನ್ನು ಕಾಣುತ್ತಿದ್ದರು ಎಂದು ಬಣ್ಣಿಸಿದರು. ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಹಾಗೂ ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ವಿ.ಶಿವಪ್ಪ ಮಾತನಾಡಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಶಾಧ್ಯಕ್ಷ ಕೆ.ಪಿ.ಪರಮೇಶ್, ಸರ್ಕಾರಿ ನೌಕರರ ಸಂಘದ ವೀರಶೈವ ಸಮಾಜದ ಅಧ್ಯಕ್ಷ ಎಸ್.ನಂದೀಶ್, ಬಸವೇಶ್ವರ ದೇವಾಲಯ ಟ್ರಸ್ಟ್ ಅಧ್ಯಕ್ಷ ಎಂ.ಕೆ.ಧನರಾಜು, ಬಸವೇಶ್ವರ ಸೌಹಾರ್ದ ಸಹಕಾರ ಬ್ಯಾಂಕ್ ಅಧ್ಯಕ್ಷ ಶಾಂಭಶಿವಯ್ಯ, ಕೊಡ್ಲಿಪೇಟೆ ಗಂಗಾ ವೀರಶೈವ ಮಹಿಳಾ ಸಂಘದ ಅಧ್ಯಕ್ಷೆ ಮಂಜುಳಾ ಸುರೇಶ್, ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷೆ ಸರೋಜಾ ಆರಾಧ್ಯ, ಶರಣ ಸಾಹಿತ್ಯ ಪರಿಷತ್ತು ಯುವ ಘಟಕದ ಜಿಲ್ಲಾಧ್ಯಕ್ಷ ಹಕ್ಕೆ ಮೋಹನ್, ಸೋಮವಾರಪೇಟೆ ತಾಲ್ಲೂಕು ಶಸಾಪ ಅಧ್ಯಕ್ಷ ಎಸ್.ಎಸ್.ಮಹೇಶ್, ಕುಶಾಲನಗರ ತಾಲ್ಲೂಕು ಅಧ್ಯಕ್ಷ ಎಂ.ಎಸ್.ಶಿವಾನಂದ, ಗುಡ್ಡೆಹೊಸೂರು ವೀರಶೈವ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ, ಪ್ರಮುಖರಾದ ಸದಾಶಿವಯ್ಯ ಪಲ್ಲೇದ್, ಪರಮೇಶ್, ಎಂ.ಎಸ್.ಗಣೇಶ್, ಕುಶಾಲನಗರ ದೇವಾಂಗ ಸಮಾಜದ ಅಧ್ಯಕ್ಷ ಡಿ.ವಿ.ರಾಜೇಶ್, ನಿವೃತ್ತ ಪೋಲೀಸ್ ಅಧಿಕಾರಿ ಪರಶಿವ, ಪುರಸಭೆ ಮಾಜಿ ಸದಸ್ಯ ಎಂ.ಬಿ.ಸುರೇಶ್, ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಮಣಜೂರು ಮಂಜುನಾಥ್, ಕಸಾಪ ಹೋಬಳಿ ಅಧ್ಯಕ್ಷ ಎಂ.ಎನ್.ಮೂರ್ತಿ ಮೊದಲಾದವರಿದ್ದರು.
ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕ ಪುಟ್ಟರಾಜು, ಅಕ್ಕನ ಬಳಗದ ಮನುದೇವಿ, ಮಣಿಯಮ್ಮ ವಚನ ಗೀತೆ ಹಾಡಿದರು. ಸಿದ್ದಗಂಗಾ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಎಂ.ಕೆ.ಧನರಾಜು, ಸಂತೋಷ್, ಡಿ.ವಿ.ರಾಜೇಶ್, ಕೊಡ್ಲಿಪೇಟೆ ಮಮತಾ ಸುರೇಶ, ಸರೋಜಾ ಆರಾಧ್ಯ, ಹಕ್ಕೆ ಮೋಹನ್ ಅವರನ್ನು ಸನ್ಮಾನಿಸಲಾಯಿತು.