ಕುಡಿದ ಮತ್ತಲ್ಲಿ ವಿದ್ಯಾರ್ಥಿಯಿಂದ ಅಡ್ಡಾದಿಡ್ಡಿ ಕಾರು ಚಾಲನೆ; ಪಾದಚಾರಿ ಮೃತ್ಯು

Dec 28, 2025 - 22:10
 0  1.6k
ಕುಡಿದ ಮತ್ತಲ್ಲಿ ವಿದ್ಯಾರ್ಥಿಯಿಂದ ಅಡ್ಡಾದಿಡ್ಡಿ ಕಾರು ಚಾಲನೆ; ಪಾದಚಾರಿ ಮೃತ್ಯು
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.28: ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿದ ವಿದ್ಯಾರ್ಥಿಯೊಬ್ಬನಿಂದ ಸಂಭವಿಸಿದ ಅಪಘಾತದಲ್ಲಿ ಪಾದಚಾರಿ ಮೃತಪಟ್ಟಿರುವ ಘಟನೆ ನಗರದ ಹೆಚ್‌ಎಸ್‌ಆರ್ ಲೇಔಟ್‌ನ 27ನೇ ಕ್ರಾಸ್‌ ನಲ್ಲಿ ನಡೆದಿದೆ. ಡಿಸೆಂಬರ್ 22ರಂದು ರಾತ್ರಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪೊಲೀಸರ ಪ್ರಕಾರ, ವೇಗವಾಗಿ ಬಂದ ಆಡಿ ಕಾರು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದ ಸಂತೋಷ್ (26) ಸ್ಥಳದಲ್ಲೇ ಅಸುನೀಗಿದ್ದಾರೆ. ಅಪಘಾತದ ತೀವ್ರತೆಗೆ ರಸ್ತೆ ಬದಿ ನಿಲ್ಲಿಸಿದ್ದ ಕೆಲವು ಕಾರುಗಳಿಗೂ ಹಾನಿಯಾಗಿದೆ.

ಮೃತ ಸಂತೋಷ್ ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕಾರು ಚಾಲಕ ಅಬ್ದುಲ್ ರೆಹಮಾನ್ ಎಂಬ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದನ್ನು ಆಧಾರವಾಗಿ ತನಿಖೆ ಮುಂದುವರಿಸಲಾಗಿದೆ.

ಘಟನೆಗೆ ಸಂಬಂಧಿಸಿ ಹೆಚ್‌ಎಸ್‌ಆರ್ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕ ಮದ್ಯ ಸೇವಿಸಿದ್ದಾನೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

What's Your Reaction?

Like Like 2
Dislike Dislike 0
Love Love 2
Funny Funny 2
Angry Angry 2
Sad Sad 4
Wow Wow 0