ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿ ಕಾಲಮಿತಿಯೊಳಗೆ ಪರಿಹರಿಸುವ ಪ್ರಯತ್ನ: ಜಿಲ್ಲಾಧಿಕಾರಿ ಎಸ್.ಜಿ. ಸೋಮಶೇಖರ್‌

ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿ ಕಾಲಮಿತಿಯೊಳಗೆ ಪರಿಹರಿಸುವ ಪ್ರಯತ್ನ: ಜಿಲ್ಲಾಧಿಕಾರಿ ಎಸ್.ಜಿ. ಸೋಮಶೇಖರ್‌

ಮಡಿಕೇರಿ:ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿ ಕಾಲಮಿತಿಯೊಳಗೆ ಪರಿಹರಿಸುವ ಪ್ರಯತ್ನ ಮಾಡುವುದಾಗಿ ಜಿಲ್ಲಾಧಿಕಾರಿ ಎಸ್.ಜಿ. ಸೋಮಶೇಖರ್ ಹೇಳಿದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಲ್ಲಿನ ಪತ್ರಿಕಾ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

 ಕೊಡಗು ಪ್ರಾಕೃತಿಕವಾಗಿ ಶ್ರೀಮಂತ ಜಿಲ್ಲೆಯಾಗಿದೆ. ಇಲ್ಲಿನ ಪ್ರಕೃತಿಯನ್ನು ಕಾಶ್ಮೀರಕ್ಕೆ ಹೋಲಿಸಲಾಗುತ್ತದೆ. ಹಾಗಾಗಿ ದೇಶ ವಿದೇಶಗಳ ಪ್ರವಾಸಿಗರು ಇಷ್ಟುಪಟ್ಟು ಕೊಡಗಿಗೆ ಬರುತ್ತಾರೆ. ಇಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಸಂದರ್ಭ ಪೃಕೃತಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಬಗ್ಗೆ ನಾನು ವ್ಯಯಕ್ತಿಕವಾಗಿಯೂ ಕಾಳಜಿ ವಹಿಸುತ್ತೇನೆ. ಹೋಂಸ್ಟೇಗಳು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಇದರಲ್ಲಿ ಅನಧಿಕೃತ ಹೋಂಸ್ಟೇಗಳೂ ಇರುವ ಬಗ್ಗೆ ಮಾಹಿತಿ ಇದೆ. ಹೆಚ್ಚಿನ ಮನೆಗಳು ಹೋಂಸ್ಟೇಗಾಗಿ ಬಳಕೆ ಮಾಡಿಕೊಳ್ಳುವುದರಿಂದ ಇಲ್ಲಿ ವಾಸಕ್ಕೆ ಬಾಡಿಗೆಗೆ ಮನೆ ಸಿಗುತ್ತಿಲ್ಲ ಎನ್ನುವ ಮಾಹಿತಿಯೂ ಗಮನಕ್ಕೆ ಬಂದಿದೆ. ಹಾಗಾಗಿ ಅಕ್ಕಪಕ್ಕದ ರಾಜ್ಯಗಳಲ್ಲಿ ಹೋಂಸ್ಟೇ ವ್ಯವಸ್ಥೆ ಹೇಗೆ ಕಾರ್ಯಾಚರಿಸುತ್ತಿದೆ ಎನ್ನುವುದನ್ನು ಅಧ್ಯಯನ ಮಾಡಿ ಕೊಡಗಿನಲ್ಲೂ ಯಾವುದೇ ಸಮಸ್ಯೆ ಆಗದಂತೆ ಹೋಂಸ್ಟೇ ನಡೆಸಲು ಅವಕಾಶ ಮಾಡಿಕೊಡಲಾಗುವುದು. 

 2018 ಮತ್ತು ನಂತರದ ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ವೇಳೆ ಸಂತ್ರಸ್ತರಾದವರ ಪೈಕಿ ಹಲವರಿಗೆ ಇನ್ನೂ ಮನೆ ಸಿಕ್ಕಲ್ಲ. ಕೆಲವರಿಗೆ ನಿವೇಶನ ಹಂಚಿಕೆ ಆಗಿದ್ದರೂ ಅವರಿಗೆ ಹಸ್ತಾಂತರ ಆಗಿಲ್ಲ ಎನ್ನುವ ಬಗ್ಗೆ ಮಾಹಿತಿ ಇದೆ. ಮಾದಾಪುರ ಬಳಿ ಇನ್ಫೋಸಿಸ್ ಸಹಯೋಗದಲ್ಲಿ ನಿರ್ಮಿಸಿರುವ ಮನೆಗಳ ಸ್ಥಿತಿ ಗತಿಯನ್ನೂ ಪರಿಶೀಲಿಸಲಾಗುವುದು. ಸಂತ್ರಸ್ತರಿಗೆ ಶೀಘ್ರ ವಸತಿ ಸೌಲಭ್ಯ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು.

 ಕೊಡಗಿನಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಮಳೆ ಸುರಿದ ಕಾರಣ ಭೂಕುಸಿತಗಳು ಸಂಭವಿಸಿದವು. ಇಳಿಜಾರಿನ ಪ್ರದೇಶದಲ್ಲಿ ಅವೈಜ್ಞಾನಿಕ ಕೆಲಸಗಳೂ ಇದಕ್ಕೆ ಪೂರಕವಾಗಿ ವರ್ತಿಸಿದವು. ನಗರೀಕರಣ ಹೆಚ್ಚಾದಂತೆ ಪ್ರಕೃತಿ ಮೇಲಿನ ಒತ್ತಡ ಹೆಚ್ಚಾಯಿತು. ಈ ಎಲ್ಲಾ ಕಾರಣಗಳಿಂದ ಪ್ರಾಕೃತಿಕ ವಿಕೋಪ ಸಂಭವಿಸಿತು. ಹಾಗಾಗಿ ಭೂಪರಿವರ್ತನೆಗೆ ಅನುಮತಿ ಕೊಡುವಾಗ ಸಾಕಷ್ಟು ಯೋಚಿಸಬೇಕಾಗಿದೆ. ವಾಸಕ್ಕಾಗಿ ಮನೆ ಕಟ್ಟಿಕೊಳ್ಳುವವರು ಚಿಕ್ಕ ಜಾಗಗಳನ್ನು ಸಮತಟ್ಟು ಮಾಡಿಕೊಳ್ಳುವುದರಿಂದ ಏನೂ ಸಮಸ್ಯೆ ಆಗುವುದಿಲ್ಲ. ಆದರೆ ಏಕರೆಗಟ್ಟಲೆ ಜಾಗದಲ್ಲಿ ಗುಡ್ಡಗಳನ್ನು ಸಮತಟ್ಟು ಮಾಡಿದರೆ ಸಮಸ್ಯೆ ಸಹಜ. ಹಾಗಾಗಿ ಈ ಬಗ್ಗೆ ಚಿಂತನೆ ಅಗತ್ಯ. 

 ಮಡಿಕೇರಿಯಲ್ಲಿ ವಾಹನ ದಟ್ಟಣೆ ಸಮಸ್ಯೆ ಇದೆ. ಪಾರ್ಕಿಂಗ್‌ಗೂ ಜಾಗ ಇಲ್ಲ ಎನ್ನುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಪರ್ಯಾಯ ಕ್ರಮಗಳ ಬಗ್ಗೆ ಚಿಂತನೆ ಹರಿಸಲಾಗುವುದು. ನದಿತೀರದ ಬಫರ್ ಝೋನ್‌ಗಳಲ್ಲಿ ಮನೆ ಕಟ್ಟುವ ಸಂದರ್ಭ ಅನುಮತಿ ನೀಡುವ ವೇಳೆ ಸೂಕ್ತ ಎಚ್ಚರಿಕೆ ತೆಗೆದುಕೊಳ್ಳಲಾಗುವುದು. ಬೀದಿ ನಾಯಿಗಳ ಸಮಸ್ಯೆ ಬಗೆಹರಿಸಲೂ ಕ್ರಮ ತೆಗೆದುಕೊಳ್ಳಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರವೂ ಬೇಕು ಎಂದರು.

 ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಹಾಸ್ಟೆಲ್‌ಗಳಲ್ಲಿ ನಿರ್ವಹಣೆ ಲೋಪ, ಏಕ ಬಳಕೆ ಪ್ಲಾಸ್ಟಿಕ್ ಬಳಕೆ ನಿಷೇಧ, ಯುಜಿಡಿ ಕಾಮಗಾರಿ, ಅಮೃತ್ 2 ಕಾಮಗಾರಿ, ವಲಸೆ ಕಾರ್ಮಿಕರ ಸಮಸ್ಯೆ, ಸ್ಪಾ, ಮಸಾಜ್ ಸೆಂಟರ್‌ಗಳ ಹಾವಳಿ, ರಸ್ತೆ ಸಮಸ್ಯೆ... ಹೀಗೆ ವಿವಿಧ ವಿಷಯಗಳು ಸಂವಾದದಲ್ಲಿ ಪ್ರಸ್ತಾಪ ಆದವು. ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡುವಂತೆ ಸಲಹೆಗಳು ಕೇಳಿಬಂದವು.

 ಜಿ. ರಾಜೇಂದ್ರ, ಎಂ.ಎನ್. ಚಂದ್ರಮೋಹನ್, ಬಿ.ಆರ್. ಸವಿತಾ ರೈ, ಟಿ.ಆರ್. ಪ್ರಭುದೇವ್, ಗೋಪಾಲ್ ಸೋಮಯ್ಯ, ರವಿಕುಮಾರ್, ಮಲ್ಲಿಕಾರ್ಜುನ, ಗಿರೀಶ್, ಜೆರಾಲ್ಡ್ ಥೋಮಸ್, ವಿಶ್ವಕುಂಬೂರು, ಬೊಳ್ಳಜೀರ ಅಯ್ಯಪ್ಪ ಸೇರಿದಂತೆ ಹಲವರು ವಿವಿಧ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

 ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನುಕಾರ್ಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಚಿನ್ನಸ್ವಾಮಿ ಇದ್ದರು. ಸಂಘದ ಖಜಾಂಚಿ ಸುನಿಲ್ ಪೊನ್ನೇಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಗೋಪಾಲ್ ಸೋಮಯ್ಯ ವಂದಿಸಿದರು. ಇದೇ ಸಂದರ್ಭ ಸಂಘದ ವತಿಯಿಂದ ಜಿಲ್ಲಾಧಿಕಾರಿ ಎಸ್.ಜಿ. ಸೋಮಶೇಖರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.