‘Love U ಚಿನ್ನಿ’ ಎಂದು ಇನ್ಸ್‌ಪೆಕ್ಟರ್ ಹಿಂದೆ ಬಿದ್ದ ಮಹಿಳೆ ವಿರುದ್ಧ ಎಫ್‌ಐಆರ್

Dec 17, 2025 - 23:46
 0  1.3k
‘Love U ಚಿನ್ನಿ’ ಎಂದು ಇನ್ಸ್‌ಪೆಕ್ಟರ್ ಹಿಂದೆ ಬಿದ್ದ ಮಹಿಳೆ ವಿರುದ್ಧ ಎಫ್‌ಐಆರ್

ಬೆಂಗಳೂರು, ಡಿ.17: ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಸತೀಶ್ ರಿಗೆ ಮಹಿಳೆಯೊಬ್ಬರ ನಿರಂತರ ಪ್ರೇಮ ಕಾಟ ತೀವ್ರ ತಲೆನೋವಾಗಿರುವ ಘಟನೆ ಬೆಳಕಿಗೆ ಬಂದಿದೆ. ಪ್ರೀತಿ ನಿರಾಕರಿಸಿದ ಕಾರಣ ಆತ್ಮಹತ್ಯೆ ಬೆದರಿಕೆ ಹಾಕಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಮಹಿಳೆ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಆರೋಪಿತ ಮಹಿಳೆ ತಾನು ರಾಜಕೀಯ ಪಕ್ಷದ ಕಾರ್ಯಕರ್ತೆ ಎಂದು ಹೇಳಿಕೊಂಡಿದ್ದು, ಪ್ರಭಾವಿ ರಾಜಕೀಯ ನಾಯಕರೊಂದಿಗೆ ಪರಿಚಯವಿದೆ ಎಂದು ಹೇಳಿ ಇನ್ಸ್‌ಪೆಕ್ಟರ್ ಮೇಲೆ ಒತ್ತಡ ಹೇರುತ್ತಿದ್ದಳು ಎಂದು ದೂರು ನೀಡಲಾಗಿದೆ. ‘‘Chinni, Love U… ನೀನು ನನ್ನನ್ನು ಪ್ರೀತಿಸಲೇಬೇಕು’’ ಎಂಬ ಸಂದೇಶಗಳ ಮೂಲಕ ನಿರಂತರವಾಗಿ ಕಾಟ ಕೊಡುತ್ತಿದ್ದಳು ಎಂದು ಆರೋಪಿಸಲಾಗಿದೆ.

ಠಾಣೆಗೆ ಹೂಗುಚ್ಛ, ಸಿಹಿ ತಂದು ಇಟ್ಟ ಮಹಿಳೆ

ಮಹಿಳೆಯ ಕಾಟ ಅತಿರೇಕದ ಮಟ್ಟಿಗೆ ಮುಂದುವರಿದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ಸ್‌ಪೆಕ್ಟರ್ ಠಾಣೆಯಲ್ಲಿ ಇಲ್ಲದ ವೇಳೆ ಹೂಗುಚ್ಛ ಹಾಗೂ ಸಿಹಿಯನ್ನು ಠಾಣೆಗೆ ತಂದು ಇಟ್ಟಿದ್ದಾಳೆ. ಅಲ್ಲದೆ, 11 ವಿಭಿನ್ನ ಮೊಬೈಲ್ ಸಂಖ್ಯೆಗಳ ಮೂಲಕ ನಿರಂತರವಾಗಿ ಕರೆ ಮಾಡಿ ಪ್ರೀತಿ ನಿವೇದನೆ ಮಾಡುತ್ತಿದ್ದಳು. ಈ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಎಲ್ಲ ಸಂಖ್ಯೆಗಳನ್ನೂ ಬ್ಲಾಕ್ ಮಾಡಿದ್ದರು.

ರಕ್ತದಲ್ಲಿ ಪತ್ರ, ಆತ್ಮಹತ್ಯೆ ಬೆದರಿಕೆ

ಇದಕ್ಕೂ ಮೀರಿಸಿ, ಮಹಿಳೆ ಲವ್ ಲೆಟರ್‌ ಜೊತೆಗೆ ಆತ್ಮಹತ್ಯೆ ಬೆದರಿಕೆಯ ಪತ್ರವನ್ನು ಪೋಸ್ಟ್ ಮೂಲಕ ಠಾಣೆಗೆ ಕಳುಹಿಸಿದ್ದಾಳೆ ಎನ್ನಲಾಗಿದೆ. ‘ನನ್ನ ಪ್ರೀತಿಯನ್ನು ನೀವು ಒಪ್ಪಿಕೊಳ್ಳದಿದ್ದರೆ ನಾನು ಬದುಕುವುದಿಲ್ಲ. ನನ್ನ ಸಾವಿಗೆ ನೀವೇ ಕಾರಣ’ ಎಂದು ಬರೆದು, ರಕ್ತದಲ್ಲಿ ಬರೆಯಲಾದ ಸಂದೇಶವನ್ನು ಕಳುಹಿಸಿರುವುದು ಗಂಭೀರ ಆರೋಪವಾಗಿದೆ.

ಈ ನಡುವೆ ಮಹಿಳೆ ದೂರು ನೀಡಲು ಠಾಣೆಗೆ ಬಂದಿರುವುದಾಗಿ ಗೃಹ ಸಚಿವರ ಕಚೇರಿಯಿಂದ ಕರೆ ಬಂದಿತ್ತು ಎನ್ನಲಾಗಿದೆ. ಆದರೆ ಮಹಿಳೆ ಯಾವುದೇ ಅಧಿಕೃತ ದೂರು ಸಲ್ಲಿಸಿಲ್ಲ ಎಂದು ಇನ್ಸ್‌ಪೆಕ್ಟರ್ ಸ್ಪಷ್ಟಪಡಿಸಿದ್ದಾರೆ.

ನಿರಂತರ ಕಾಟದಿಂದ ಬೇಸತ್ತ ಇನ್ಸ್‌ಪೆಕ್ಟರ್ ಅವರು ಕಾನೂನು ಕ್ರಮಕ್ಕೆ ಮುಂದಾಗಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಆತ್ಮಹತ್ಯೆ ಬೆದರಿಕೆ ಹಾಕಿದ ಆರೋಪದಡಿ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಮಹಿಳೆಯ ವರ್ತನೆಯ ಹಿಂದಿನ ನಿಜಾಂಶಗಳನ್ನು ಪರಿಶೀಲಿಸಲಾಗುತ್ತಿದೆ.

What's Your Reaction?

Like Like 0
Dislike Dislike 3
Love Love 1
Funny Funny 1
Angry Angry 1
Sad Sad 1
Wow Wow 0