ಮಕ್ಕಳತ್ತ ಪಟಾಕಿ ಎಸೆದು ವಿಕೃತಿ ಮೆರೆದ ಇಬ್ಬರ ವಿರುದ್ಧ ಎಫ್‌ಐಆರ್

ಮಕ್ಕಳತ್ತ ಪಟಾಕಿ ಎಸೆದು ವಿಕೃತಿ ಮೆರೆದ ಇಬ್ಬರ ವಿರುದ್ಧ ಎಫ್‌ಐಆರ್

ಬೆಂಗಳೂರು: ಮಕ್ಕಳತ್ತ ಪಟಾಕಿ ಎಸೆದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಭಾನುವಾರ ಎಫ್‌ಐಆರ್ ದಾಖಲಾಗಿದೆ.

ದೇವಿನಗರದ ರಾಜೇಶ್ವರಿ ಕಂದಪ್ಪ ಅವರ ದೂರು ಆಧಾರದಲ್ಲಿ, ಹಿರಾನಂದನಿ ಅಪಾರ್ಟ್‌ಮೆಂಟ್‌ನ ನಿವಾಸಿಗಳಾದ ದೀಪಾಂಕು ಶಾ ಮತ್ತು ಇನ್ನೊಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಕ್ಟೋಬರ್ 22ರ ರಾತ್ರಿ ಮಕ್ಕಳು ಪಟಾಕಿ ಸಿಡಿಸುತ್ತಿದ್ದ ವೇಳೆ, ಎ-904ರಲ್ಲಿ ವಾಸಿಸುವ ದೀಪಾಂಕು ಶಾ ಅವರು ಮಕ್ಕಳತ್ತ ಪಟಾಕಿ ಎಸೆದ ಪರಿಣಾಮ ರಾಜೇಶ್ವರಿ ಅವರ ಮಗನ ಕೈ ಸುಟ್ಟಿದೆ. ಮಗಳು ಅಪಾಯದಿಂದ ಪಾರಾಗಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ಬಳಿಕ ಸುಮಾರು ಹತ್ತು ಮಂದಿಯೊಂದಿಗೆ ಆರೋಪಿಗಳು ದೂರುದಾರರ ಮನೆಗೆ ಬಂದು ಗದ್ದಲ ಮಾಡಿ, ನಿಂದಿಸಿ, ಮನೆ ಒಳನುಗ್ಗಲು ಯತ್ನಿಸಿದ್ದು, ಮಕ್ಕಳ ಹಾಗೂ ಮಹಿಳೆಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ.

“ಮನವಿ ಮಾಡಿದರೂ ಕೇಳದೇ ಗಲಾಟೆ ಮಾಡಿ ಭೀತಿ ಹುಟ್ಟಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ರಾಜೇಶ್ವರಿ ಮನವಿ ಮಾಡಿದ್ದಾರೆ.

ಪ್ರಕರಣದ ತನಿಖೆ ಕೈಗೊಂಡಿರುವ ಕೊಡಿಗೆಹಳ್ಳಿ ಠಾಣೆ ಪೊಲೀಸರು, ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.