ಮದ್ಯದ ಅಮಲಿನಲ್ಲಿ ಮಚ್ಚಿನಿಂದ ಮಗನ ಹತ್ಯೆಗೈದ ತಂದೆ
ಚಿಕ್ಕಮಗಳೂರು, ಜ. 4: ಮದ್ಯದ ಅಮಲಿನಲ್ಲಿ ತಂದೆಯೇ ತನ್ನ ಮಗನನ್ನು ಮಚ್ಚಿನಿಂದ ಕೊಚ್ಚಿ ಹತ್ಯೆಗೈದ ಭೀಕರ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿಯ ಆನೆಗುಂಡಿ ಗ್ರಾಮದಲ್ಲಿ ನಡೆದಿದೆ. ಪ್ರದೀಪ್ ಆಚಾರ್ (ಮೃತ) ಎಂಬ ಯುವಕನನ್ನು ಆತನ ತಂದೆ ರಮೇಶ್ ಆಚಾರ್ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮದ್ಯಪಾನ ಮಾಡಿದ್ದ ರಮೇಶ್ ಆಚಾರ್ ಮತ್ತು ಮಗ ಪ್ರದೀಪ್ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ಉಂಟಾಗಿದೆ. ಈ ವೇಳೆ ಆಕ್ರೋಶಗೊಂಡ ತಂದೆ ಮಚ್ಚಿನಿಂದ ಮಗನ ಮೇಲೆ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಪ್ರದೀಪ್ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕುಸಿದು ಸಾವನ್ನಪ್ಪಿದ್ದಾನೆ. ನಂತರ ಮೃತದೇಹವನ್ನು ಮನೆಯ ಹಾಲ್‌ನಿಂದ ಹೊರಾಂಗಣಕ್ಕೆ ತಂದಾಗ, ಇದನ್ನು ಕಂಡ ನೆರೆಹೊರೆಯವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮದ್ಯಪಾನದ ಚಟದಿಂದಾಗಿ ತಂದೆ–ಮಗನ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಈ ಕಾಟದಿಂದ ಬೇಸತ್ತ ಪ್ರದೀಪ್ ತಾಯಿ ಕೆಲ ಸಮಯ ಹಿಂದೆ ಮನೆ ಬಿಟ್ಟು ತೆರಳಿದ್ದು, ನಂತರ ಮನೆಯಲ್ಲಿ ತಂದೆ ಮತ್ತು ಮಗ ಮಾತ್ರ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
What's Your Reaction?
Like
0
Dislike
0
Love
1
Funny
0
Angry
0
Sad
2
Wow
0
