CRIME

ಮಕ್ಕಳ ಮುಂದೆಯೇ ಪತ್ನಿಗೆ ಬೆಂಕಿ; ಮಗಳನ್ನೂ ಅದೇ ಬೆಂಕಿಗೆ ತಳ್ಳಿದ ಪಾಪಿ ತಂದೆ

admincoorgdaily

Photo credit: TV09

ಹೈದರಾಬಾದ್, ಡಿ. 26: ಮಕ್ಕಳ ಕಣ್ಣೆದುರಲ್ಲೇ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಆಕೆಯನ್ನು ರಕ್ಷಿಸಲು ಮುಂದಾದ ಮಗಳನ್ನೂ ಅದೇ ಬೆಂಕಿಗೆ ತಳ್ಳಿದ ಅಮಾನವೀಯ ಘಟನೆ ಹೈದರಾಬಾದ್‌ನ ನಲ್ಲಕುಂಟಾ ಪ್ರದೇಶದಲ್ಲಿ ನಡೆದಿದೆ. ಈ ಘಟನೆಯಲ್ಲಿ ತ್ರಿವೇಣಿ ಎಂಬ ಮಹಿಳೆ ಸಜೀವ ದಹನಗೊಂಡು ಮೃತಪಟ್ಟಿದ್ದು, ಮಗಳು ಸುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಪೊಲೀಸರ ಪ್ರಕಾರ, ಡಿಸೆಂಬರ್ 24ರಂದು ವೆಂಕಟೇಶ್ ಎಂಬ ವ್ಯಕ್ತಿ ತನ್ನ ಪತ್ನಿ ತ್ರಿವೇಣಿ ಮೇಲೆ ಅನುಮಾನ ವ್ಯಕ್ತಪಡಿಸಿ ಜಗಳ ಆರಂಭಿಸಿದ್ದಾನೆ. ಬಳಿಕ ಮಕ್ಕಳ ಮುಂದೆಯೇ ಆಕೆಯ ಮೇಲೆ ಹಲ್ಲೆ ನಡೆಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ತಾಯಿಯನ್ನು ರಕ್ಷಿಸಲು ಮಗಳು ಮಧ್ಯಪ್ರವೇಶಿಸಿದಾಗ, ಆಕೆಯನ್ನೂ ಬೆಂಕಿಗೆ ತಳ್ಳಿ ವೆಂಕಟೇಶ್ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯ ಸಂದರ್ಭದಲ್ಲಿ ಕೇಳಿಬಂದ ಕಿರುಚಾಟಕ್ಕೆ ನೆರೆಹೊರೆಯವರು ಮನೆಗೆ ಧಾವಿಸಿದರೂ, ತ್ರಿವೇಣಿ ತೀವ್ರ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದರು. ಗಾಯಗೊಂಡ ಮಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ವೆಂಕಟೇಶ್ ಮತ್ತು ತ್ರಿವೇಣಿ ಪ್ರೇಮ ವಿವಾಹವಾಗಿದ್ದು, ಅವರಿಗೆ ಒಬ್ಬಳು ಮಗಳು ಹಾಗೂ ಒಬ್ಬ ಮಗ ಇದ್ದಾರೆ. ಪತ್ನಿಯ ಮೇಲೆ ಅನುಮಾನ ಬೆಳೆಸಿಕೊಂಡ ವೆಂಕಟೇಶ್ ನಿರಂತರವಾಗಿ ಕಿರುಕುಳ ನೀಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತ್ರಿವೇಣಿ ಇತ್ತೀಚೆಗೆ ಹೆತ್ತವರ ಮನೆಗೆ ತೆರಳಿದ್ದಳು. ಬಳಿಕ ತನ್ನ ವರ್ತನೆ ಬದಲಾಯಿಸುವುದಾಗಿ ಭರವಸೆ ನೀಡಿ ವೆಂಕಟೇಶ್ ಆಕೆಯನ್ನು ಮರಳಿ ಮನೆಗೆ ಕರೆತಂದಿದ್ದಾನೆ. ಆ ಬಳಿಕವೇ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ವೆಂಕಟೇಶ್ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.