ಅರಣ್ಯ ಇಲಾಖೆಯಿಂದ ದಬ್ಬಾಳಿಕೆ: ಆರೋಪ! ಸುಂದರನಗರ ಗ್ರಾಮಸ್ಥರ ಆಕ್ರೋಶ | ಪ್ರತಿಭಟನೆಯ ಎಚ್ಚರಿಕೆ

Jan 9, 2026 - 09:31
 0  790
ಅರಣ್ಯ ಇಲಾಖೆಯಿಂದ ದಬ್ಬಾಳಿಕೆ: ಆರೋಪ! ಸುಂದರನಗರ ಗ್ರಾಮಸ್ಥರ ಆಕ್ರೋಶ | ಪ್ರತಿಭಟನೆಯ ಎಚ್ಚರಿಕೆ

ಕುಶಾಲನಗರ,ಜ೮: ಕೂಡುಮಂಗಳೂರು ಗ್ರಾಮ‌ಪಂಚಾಯಿತಿಯ ಸುಂದರನಗರದ ೩೧/೧ ರಲ್ಲಿ ಅರಣ್ಯ ಇಲಾಖೆಯವರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 

ಸುಂದರನಗರದ ೩೧/೧ ರಲ್ಲಿ ದೇವಸ್ಥಾನಕ್ಕೆ ಎಂದು ಕಾಯ್ದಿರಿಸಿದ್ದ ಜಾಗದ ಬೇಲಿಯನ್ನು ಅರಣ್ಯ ಇಲಾಖೆಯವರು ತೆರವುಗೊಳಿಸಿದ್ದಾರೆ ಎಂದು ಆರೋಪಿಸಿರುವ ಗ್ರಾಮಸ್ಥರು, ಈ ಬಗ್ಗೆ ಸಂಬಂಧಿಸಿದವರು ಪರಿಶೀಲನೆ‌ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 

ಈ ಹಿಂದೆಯಿದ್ದ ಸರ್ವೇ ನಂಬರ್ ೩೧ ಈಗ ೩೧/೧ ಆಗಿದೆ.‌ ಸ್ಥಳದಲ್ಲಿ ನೂರಾರು ಕುಟುಂಬಗಳು ಹಲವು ದಶಕಗಳಿಂದ ವಾಸವಿದ್ದು, ಅರಣ್ಯ ಇಲಾಖೆಯವರು ಇದೀಗ ಸಾರ್ವಜನಿಕರಿಗೆ ಕಿರಿಕಿರಿಯುಂಟುಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. 

ಕೂಡುಮಂಗಳೂರು ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಮಾತನಾಡಿ, ಸುಂದರನಗರದ ಸರ್ವೆ ನಂಬರ್ ೩೧/೧ ರಲ್ಲಿ ನೂರಾರು ಕುಟುಂಬಗಳು ನಾಲ್ಕೈದು ದಶಲಗಳಿಂದ ವಾಸವಿದ್ದಾರೆ. ಇದೀಗ ದಿಢೀರನೇ ಅರಣ್ಯ ಇಲಾಖೆ ಬಂದು ಬೇಲಿ ತೆರವುಗೊಳಿಸಿರುವುದು ಸರಿಯಲ್ಲ. ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗುವುದು. ಅರಣ್ಯ ಇಲಾಖೆಯಿಂದ ಮತ್ತೆ ಇಂತಹ ಘಟನೆ ಮರುಕಳಿಸಿದ್ದಲ್ಲಿ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದರು. 

ಸ್ಥಳೀಯ ಗ್ರಾಮಸ್ಥರಾದ ಎಚ್.ಅಣ್ಣಯ್ಯ ಹಾಗೂ ಸುಕುಮಾರ್ ಮಾತನಾಡಿ, ಸರ್ವೇ ನಂಬರ್ ೩೧/೧ ರಲ್ಲಿ ಕಳೆದ ೪೦ ವರ್ಷಗಳಿಂದ ಗ್ರಾಮಸ್ಥರು ವಾಸವಿದ್ದಾರೆ. ಇದೀಗ ಅರಣ್ಯ ಇಲಾಖೆಯವರು ಇಲಾಖೆಯ ಜಾಗ ಎಂದು ಗ್ರಾಮಸ್ಥರಿಗೆ ತೊಂದರೆ ನೀಡುತ್ತಿದ್ದಾರೆ. ಇದು ಮುಂದುವರೆದಲ್ಲಿ ಅರಣ್ಯ ಇಲಾಖೆಯ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಮದರು. 

ಸ್ಥಳೀಯ ನಿವಾಸಿ ಕಲ್ಪನ‌ ಮಾತನಾಡಿ, ಹಲವಾರು ವರ್ಷಗಳಿಂದ ಇಲ್ಲಿ ಕೃಷಿ ಹಾಗೂ ಇನ್ನಿತರ ಚಟುವಟಿಕೆಗಳನ್ನು ಮಾಡಿ ಜೀವನ ಸಾಗಿಸುತ್ತಿದ್ದೇವೆ.‌ ಅರಣ್ಯ ಇಲಾಖೆಯವರು ನಮಗೆ ತೊಂದರೆ ನೀಡಬಾರದು. 

ಈ ಸಂದರ್ಭ ಗ್ರಾಮಸ್ಥರಾದ ರಮೇಶ್, ಗುರೀಶ್ ಕುಮಾರ್, ಮಹದೇವಮ್ಮ, ಸುಶೀಲ, ನಾಗಿ, ಪಲ್ಲವಿ ಹಾಗೂ ಇನ್ನಿತರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0