ನಕಲಿ ಕಾಲ್‌ಸೆಂಟರ್ ಮೂಲಕ ಆಸ್ಟ್ರೇಲಿಯದ ಪ್ರಜೆಗಳಿಂದ 8–10 ಕೋಟಿ ರೂ. ದೋಚಿದ ಗ್ಯಾಂಗ್!

Nov 30, 2025 - 19:07
Nov 30, 2025 - 19:07
 0  7
ನಕಲಿ ಕಾಲ್‌ಸೆಂಟರ್ ಮೂಲಕ ಆಸ್ಟ್ರೇಲಿಯದ ಪ್ರಜೆಗಳಿಂದ 8–10 ಕೋಟಿ ರೂ. ದೋಚಿದ ಗ್ಯಾಂಗ್!
Photo credit: Etv bharath

ಹೈದರಾಬಾದ್‌: ಹೈಟೆಕ್‌ ಸಿಟಿಯ ಮಧ್ಯದಲ್ಲೇ ಅಂತಾರಾಷ್ಟ್ರೀಯ ವಂಚನಾ ಜಾಲ ಬೆಳೆಸಿದ್ದ ನಕಲಿ ಕಾಲ್‌ಸೆಂಟರ್‌ ಮೇಲೆ ಬಾಲನಗರ ಎಸ್‌ಒಟಿ ಪೊಲೀಸರು ದಾಳಿ ನಡೆಸಿ, ಆಸ್ಟ್ರೇಲಿಯನ್ನರನ್ನು ಗುರಿ ಮಾಡಿಕೊಂಡಿದ್ದ 8–10 ಕೋಟಿ ರೂ. ವಂಚನೆ ಪ್ರಕರಣವನ್ನು ಬಯಲಿಗೆಳೆದಿದ್ದಾರೆ. ಶನಿವಾರ ಗಚಿಬೌಲಿಯಲ್ಲಿ ಸೈಬರಾಬಾದ್‌ ಪೊಲೀಸರು ಈ ಬೃಹತ್‌ ವಂಚನೆಯ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

 ಸೈಬರ್ ವಂಚನಾ ಗ್ಯಾಂಗ್ ಆಸ್ಟ್ರೇಲಿಯಾದ ನಾಗರಿಕರ ಇಮೇಲ್‌ ಐಡಿ ಹಾಗೂ ವೈಯಕ್ತಿಕ ಮಾಹಿತಿ ಸಂಗ್ರಹಿಸಿ, ‘ನಿಮ್ಮ ಸಿಸ್ಟಮ್‌ ಹ್ಯಾಕ್ ಆಗಿದೆ’ ಎಂಬ ನಕಲಿ ಎಚ್ಚರಿಕೆ ಇಮೇಲ್ ಮತ್ತು ಪಾಪ್‌ಅಪ್ ಕಳುಹಿಸುತ್ತಿತ್ತು. ನಂತರ ‘ಸಮಸ್ಯೆ ಪರಿಹಾರಕ್ಕೆ ಗ್ರಾಹಕ ಸೇವೆಯನ್ನು ಸಂಪರ್ಕಿಸಿ’ ಎಂದು ನಕಲಿ ಹಾಟ್‌ಲೈನ್‌ ಸಂಖ್ಯೆಯನ್ನು ಕೊಡಲಾಗುತ್ತಿತ್ತು.

ಅದರ ಮೇಲೆ ನಂಬಿಕೆ ಇಟ್ಟು ಕರೆ ಮಾಡಿದವರನ್ನು AnyDesk ಮೂಲಕ ತಮ್ಮ ವಶಕ್ಕೆ ತೆಗೆದುಕೊಂಡು, ಬ್ಯಾಂಕ್‌ ಲಾಗಿನ್ ವಿವರ ಸಂಗ್ರಹಿಸಿ ಹಣ ವರ್ಗಾಯಿಸುವ ವಂಚನೆ ನಡೆಯುತ್ತಿತ್ತು ಎಂದು ಸೈಬರ್ ಕ್ರೈಂ ಡಿಸಿಪಿ ವೈ.ವಿ.ಎಸ್ ಸುಧೀಂದ್ರ ತಿಳಿಸಿದ್ದಾರೆ.

 ಈ ಜಾಲದ ಕಿಂಗ್ ಪಿನ್ ಗಳನ್ನು ಖಮ್ಮಂ ಜಿಲ್ಲೆಯ ಸಹೋದರರಾದ ಪ್ರವೀಣ್ ಮತ್ತು ಪ್ರಕಾಶ್ ಎಂದು ಗುರುತಿಸಲಾಗಿದೆ. 2024ರಲ್ಲಿ ಮಾಧಾಪುರದ ಅಯ್ಯಪ್ಪ ಸೊಸೈಟಿಯಲ್ಲಿ ‘ರಿಟ್ಜ್ ಐಟಿ ಸೊಲ್ಯೂಷನ್ಸ್’ ಹೆಸರಿನಲ್ಲಿ ನಕಲಿ ಕಾಲ್‌ಸೆಂಟರ್ ತೆರೆಯಲಾಗಿತ್ತು. ನಿರ್ವಹಣೆಯನ್ನು ಗಣೇಶ್ ಮತ್ತು ಚೆನ್ನಕೇಶವ ಮಾಡುತ್ತಿದ್ದರು.

ಆಸ್ಟ್ರೇಲಿಯನ್‌ ಉಚ್ಚಾರಣೆಯಂತೆ ಇಂಗ್ಲಿಷ್ ಮಾತನಾಡಬಲ್ಲ ಟೆಲಿಕಾಲರ್‌ಗಳಿಗಾಗಿ ಕೋಲ್ಕತ್ತಾದಿಂದ ಮೌಮಿತಾ ಮಂಡಲ್, ಇಜಾಜ್ ಅಹ್ಮದ್, ಸಂಬಿತ್ ರಾಯ್, ಶಾನಿಕ್ ಬ್ಯಾನರ್ಜಿ, ಮೌಮಿತಾ ಮಲ್ಲಿಕ್, ಶಿಲ್ಪಿ ಸಮದ್ದಾರ್ ಹಾಗೂ ಕುನಾಲ್ ಸಿಂಗ್‌ರನ್ನು ಕರೆತರಲಾಗಿತ್ತು.

 “ಕೇವಲ ಎರಡು ವರ್ಷಗಳಲ್ಲಿ 8–10 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ. ವಂಚಿಸಿದ ಹಣವನ್ನು ಭಾರತೀಯ ವಿದ್ಯಾರ್ಥಿಗಳ ಖಾತೆಗಳಿಗೆ ವರ್ಗಾಯಿಸಿ, ನಂತರ ಹವಾಲಾ ಮತ್ತು ಕ್ರಿಪ್ಟೋ ಮೂಲಕ ಚಲಾವಣೆ ಮಾಡುತ್ತಿದ್ದರು,” ಎಂದು ಅಧಿಕಾರಿಗಳು ವಿವರಿಸಿದರು.

ಬಾಲನಗರ ಎಸ್‌ಒಟಿ ಇನ್ಸ್‌ಪೆಕ್ಟರ್ ಶಿವಕುಮಾರ್ ತಂಡ ನಡೆಸಿದ ದಾಳಿಯಲ್ಲಿ 9 ಮಂದಿ ಬಂಧಿತರಾಗಿದ್ದು, ಪ್ರಮುಖ ಆರೋಪಿ ಸಹೋದರರು ಪರಾರಿಯಾಗಿದ್ದಾರೆ. “ಅವರ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ. ಶೀಘ್ರದಲ್ಲೇ ಅವರನ್ನು ವಶಕ್ಕೆ ಪಡೆಯಲಾಗುವುದು,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ವಂಚನೆಗೆ ಸಂಬಂಧಿಸಿದಂತೆ ಆಸ್ಟ್ರೇಲಿಯಾದ 45 ಬ್ಯಾಂಕ್‌ ಖಾತೆಗಳ ವಿವರ ಈಗಾಗಲೇ ಪೊಲೀಸರ ವಶದಲ್ಲಿದ್ದು, ಹಣದ ಹರಿವು ಪತ್ತೆಹಚ್ಚುವ ಕಾರ್ಯ ಮುಂದುವರೆದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0