ಗೌರಿ’ ಧಾರಾವಾಹಿ ನಟಿ ನಂದಿನಿ ಆತ್ಮಹತ್ಯೆ, ಡೆತ್‌ ನೋಟ್ ಪತ್ತೆ

Dec 31, 2025 - 01:25
 0  2.3k
ಗೌರಿ’ ಧಾರಾವಾಹಿ ನಟಿ ನಂದಿನಿ ಆತ್ಮಹತ್ಯೆ, ಡೆತ್‌ ನೋಟ್ ಪತ್ತೆ
ಫೋಟೋ;ನಂದನಿ (Instagram post)

ಬೆಂಗಳೂರು, ಡಿ. 30: ಖಾಸಗಿ ಕನ್ನಡ ವಾಹಿನಿಯ ‘’ ಧಾರಾವಾಹಿಯಲ್ಲಿ ನಟಿಸಿದ್ದ ಕಿರುತೆರೆ ನಟಿ ನಂದಿನಿ (26) ಡೆತ್‌ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಡಿಸೆಂಬರ್‌ 28ರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೈಲಸಂದ್ರದ ಇನ್ಸ್ಟಾ ಲಿವಿಂಗ್ ಪಿಜಿಯಲ್ಲಿ ವಾಸವಾಗಿದ್ದ ನಂದಿನಿ ಅವರ ತಾಯಿ ನೀಡಿದ ದೂರಿನ ಆಧಾರದಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲಿ ಪತ್ತೆಯಾದ ಡೈರಿಯಲ್ಲಿ ಡೆತ್‌ ನೋಟ್ ಇದ್ದು, “ನನಗೆ ಸರ್ಕಾರಿ ಕೆಲಸ ಮಾಡಲು ಇಷ್ಟವಿಲ್ಲ. ಆ್ಯಕ್ಟಿಂಗ್‌ ನನ್ನ ಆಸಕ್ತಿ. ಮನೆಯಲ್ಲಿ ಯಾರೂ ನನ್ನ ಮಾತನ್ನು ಕೇಳುತ್ತಿಲ್ಲ” ಎಂದು ಅವರು ಬರೆದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ನಂದಿನಿ ಖಾಸಗಿ ಕನ್ನಡ ವಾಹಿನಿಯ ‘ಗೌರಿ’ ಧಾರಾವಾಹಿಯೊಂದಿಗೆ ತಮಿಳು ಭಾಷೆಯ ಧಾರಾವಾಹಿಯೊಂದರಲ್ಲೂ ಅಭಿನಯಿಸಿದ್ದರು. ನಟನಾ ಕ್ಷೇತ್ರದ ಮೇಲಿನ ಆಳವಾದ ಆಸಕ್ತಿಯಿಂದಲೇ ಅವರು ಈ ವೃತ್ತಿಯಲ್ಲಿ ಮುಂದುವರಿಯಲು ನಿರ್ಧರಿಸಿದ್ದರು ಎನ್ನಲಾಗಿದೆ.

ನಂದಿನಿಯ ತಂದೆ ಎಸ್‌. ಮಹಾಬಲೇಶ್ವರ ಅವರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದು, ಅನಾರೋಗ್ಯದಿಂದ 2021ರಲ್ಲಿ ನಿಧನರಾಗಿದ್ದರು. 2023ರಲ್ಲಿ ಅನುಕಂಪ ಆಧಾರದ ಮೇಲೆ ನಂದಿನಿಗೆ ತಾಲೂಕು ಕಚೇರಿಯಲ್ಲಿ ಉದ್ಯೋಗ ನೀಡಲಾಗಿತ್ತು. ಆದರೆ, ಅದಕ್ಕೆ ಹಾಜರಾಗದೆ ನಟನೆಯಲ್ಲೇ ಮುಂದುವರಿಯುವ ಹಠದಿಂದ ಮನೆ ತೊರೆದು ಬೆಂಗಳೂರಿಗೆ ಬಂದು ಪಿಜಿಯಲ್ಲಿ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

2018ರಲ್ಲಿ ಬಳ್ಳಾರಿಯಲ್ಲಿ ಪಿಯುಸಿ ಪೂರ್ಣಗೊಳಿಸಿದ ನಂದಿನಿ, ನಂತರ ಹೆಸರಘಟ್ಟದ ಆರ್‌.ಆರ್‌. ಇನ್ಸ್ಟಿಟ್ಯೂಟ್‌ನಲ್ಲಿ ಬಿ.ಇ. ವ್ಯಾಸಂಗಕ್ಕೆ ಸೇರಿದ್ದರು. ಬಳಿಕ ಕಾಲೇಜಿಗೆ ನಿಯಮಿತವಾಗಿ ಹಾಜರಾಗದೆ, ರಾಜರಾಜೇಶ್ವರಿನಗರದಲ್ಲಿ ನಟನಾ ತರಬೇತಿ ಪಡೆದು 2019ರಿಂದ ವಿವಿಧ ಕನ್ನಡ ಧಾರಾವಾಹಿಗಳಲ್ಲಿ ಅಭಿನಯ ಆರಂಭಿಸಿದ್ದರು. 2025ರ ಆಗಸ್ಟ್‌ನಲ್ಲಿ ಕೆಂಗೇರಿಯ ಮೈಲಸಂದ್ರದ ಇನ್ಸ್ಟಾ ಲಿವಿಂಗ್ ಪಿಜಿಗೆ ಸ್ಥಳಾಂತರಗೊಂಡಿದ್ದರು.

ಘಟನೆಯ ಕುರಿತು ಕೆಂಗೇರಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

What's Your Reaction?

Like Like 1
Dislike Dislike 1
Love Love 0
Funny Funny 0
Angry Angry 0
Sad Sad 3
Wow Wow 0