ರೈಲಿನಲ್ಲಿ ಒಂದು ಕ್ಷಣ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿ; ಎಚ್ಚರವಾಗದಾಗ 5.53 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳತನ!

ರೈಲಿನಲ್ಲಿ ಒಂದು ಕ್ಷಣ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿ; ಎಚ್ಚರವಾಗದಾಗ 5.53 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳತನ!

ಥಾಣೆ: ಸೊಲ್ಲಾಪುರ–ಮುಂಬೈ ನಡುವಿನ ಸಿದ್ದೇಶ್ವರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದ ಕಳ್ಳತನವು ಪ್ರಯಾಣಿಕರ ಭದ್ರತೆ ಕುರಿತು ಗಂಭೀರ ಆತಂಕ ಹುಟ್ಟಿಸಿದೆ. ಚಿನ್ನದ ವ್ಯಾಪಾರಿಯೊಬ್ಬರು ಕ್ಷಣ ಮಾತ್ರ ನಿದ್ದೆಗೆ ಜಾರಿದ್ದಂತೆಯೇ, ಕಳ್ಳರು 5.53 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಹೊತ್ತೊಯ್ದಿರುವ ಘಟನೆ ಹೊರಬಿದ್ದಿದೆ.

ಡಿಸೆಂಬರ್ 6 ಮತ್ತು 7ರ ಮಧ್ಯರಾತ್ರಿ ನಡೆದ ಈ ಘಟನೆ ಬಗ್ಗೆ ಕಲ್ಯಾಣ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಪ್ರಕರಣ ದಾಖಲಿಸಿದ್ದಾರೆ.

ಮುಂಬೈ ಮೂಲದ ಚಿನ್ನದ ವ್ಯಾಪಾರಿಯೊಬ್ಬರು 4,456 ಗ್ರಾಂ ಚಿನ್ನಾಭರಣವಿದ್ದ ಎರಡು ಟ್ರೋಲಿ ಬ್ಯಾಗ್‌ಗಳನ್ನು ಸರಪಳಿಯಿಂದ ಬಿಗಿದು ಸೀಟಿನ ಕೆಳಗೆ ಇಟ್ಟಿದ್ದರು. ಆದರೆ ವ್ಯಾಪಾರಿ ನಿದ್ರೆಗೆ ಜಾರುತ್ತಿದ್ದಂತೆಯೇ, ಕಳ್ಳರು ಸರಪಳಿಯನ್ನು ಮುರಿದು ಬ್ಯಾಗ್‌ಗಳನ್ನು ಎತ್ತಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

 ಸೊಲ್ಲಾಪುರ–ಕಲ್ಯಾಣ ನಡುವಿನ ಯಾವುದೋ ನಿಲ್ದಾಣದಲ್ಲಿ ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ವ್ಯಾಪಾರಿಯ ದೂರು ಸ್ವೀಕರಿಸಿದ ಪೊಲೀಸರು ಬಿಎನ್‌ಎಸ್ ಸೆಕ್ಷನ್ 305(ಸಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಘಟನೆಯ ಬಗ್ಗೆ ಮಾತನಾಡಿದ ಜಿಆರ್‌ಪಿ ಹಿರಿಯ ಇನ್ಸ್‌ಪೆಕ್ಟರ್ ಪಂಢರಿ ಕಾಂಡೆ ಅವರು,

“ಚಿನ್ನದ ವ್ಯಾಪಾರಿಯ ನಿದ್ದೆಯ ಲಾಭ ಪಡೆದು ಆರೋಪಿಗಳು ಚಿನ್ನಾಭರಣವಿದ್ದ ಬ್ಯಾಗ್‌ಗಳನ್ನು ಕದ್ದೊಯ್ದಿದ್ದಾರೆ. ಶಂಕಿತನ ಗುರುತು ಪತ್ತೆ ಮಾಡಲು ತನಿಖೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ. 

ಕಲ್ಯಾಣ ಜಿಆರ್‌ಪಿ ತಂಡಗಳು ಘಟನೆ ನಡೆದ ಮಾರ್ಗದ ಪ್ರಮುಖ ನಿಲ್ದಾಣಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಕಳ್ಳರು ಇಳಿದಿರುವ ಸಾಧ್ಯತೆಯಿರುವ ಎಲ್ಲಾ ಪ್ರವೇಶ–ನಿರ್ಗಮನದ ಮೇಲೆ ನಿಗಾ ಇಡಲಾಗಿದೆ ಎಂದು ತಿಳಿದು ಬಂದಿದೆ.