ಕೆ.ಜಿ.ಎಫ್‌ ನಲ್ಲಿ ₹1.31 ಕೋಟಿ ಮೌಲ್ಯದ ಚಿನ್ನ ಕಳವು: ಕಾರ್ಮಿಕನಿಂದಲೇ ಕೃತ್ಯ! | ನಂಬಿದ ಮಾಲೀಕನಿಗೆ ಟೋಪಿ ಹಾಕಿದ ಕೆಲಸಗಾರ

Oct 18, 2025 - 13:37
 0  970
ಕೆ.ಜಿ.ಎಫ್‌ ನಲ್ಲಿ ₹1.31 ಕೋಟಿ ಮೌಲ್ಯದ ಚಿನ್ನ ಕಳವು: ಕಾರ್ಮಿಕನಿಂದಲೇ ಕೃತ್ಯ! |  ನಂಬಿದ ಮಾಲೀಕನಿಗೆ ಟೋಪಿ ಹಾಕಿದ ಕೆಲಸಗಾರ
ಸಿಸಿಟಿವಿ ದೃಶ್ಯ

ಕೆ.ಜಿ.ಎಫ್, ಅ. 18: ರಾಬರ್ಟ್‌ನ್‌ಪೇಟೆಯ ಪ್ರಸಿದ್ಧ ಪಿ. ಬಸ್ತಿಮಲ್ ಬೋಹ್ರಾ ಜ್ಯುವೆಲ್ಲರ್ಸ್ ಅಂಗಡಿಯಿಂದ ಸುಮಾರು ₹1.31 ಕೋಟಿ ಮೌಲ್ಯದ ಚಿನ್ನಾಭರಣ ಕಳವಾದ ಪ್ರಕರಣ ಬೆಳಕಿಗೆ ಬಂದಿದೆ. ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೇ ಕೃತ್ಯ ಎಸಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದ್ದು, ಇಬ್ಬರು ರಾಜಸ್ಥಾನ ಮೂಲದ ಕಾರ್ಮಿಕರು ಪರಾರಿಯಾಗಿದ್ದಾರೆ.

ಅಂಗಡಿ ಮಾಲೀಕ ನಿತೀಶ್ ಕುಮಾರ್ ಬೋಹ್ರಾ ಅವರು ಯಶ್ ಮತ್ತು ಸುರೇಂದ್ರ ಎಂಬ ಇಬ್ಬರ ವಿರುದ್ಧ ದೂರು ದಾಖಲಿಸಿದ್ದು, ರಾಬರ್ಟ್‌ನ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಮಾಹಿತಿಯ ಪ್ರಕಾರ, ಸುರೇಂದ್ರ ಎಂಬ ಕಾರ್ಮಿಕ 2019ರಿಂದ ನಿತೀಶ್ ಕುಮಾರ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಸುಮಾರು ಒಂದು ವರ್ಷದ ನಂತರ ಆತ ಕೆಲಸ ಬಿಟ್ಟು ರಾಜಸ್ಥಾನಕ್ಕೆ ಹಿಂತಿರುಗಿದ್ದ. ಇತ್ತೀಚೆಗೆ ಆತ ನಿತೀಶ್ ಕುಮಾರ್ ಅವರ ಸಹೋದರ ಹಾಗೂ ಪಾಲುದಾರ ವಿನೋದ್ ಕುಮಾರ್ ಅವರನ್ನು ಸಂಪರ್ಕಿಸಿ, “ತನ್ನ ಪರಿಚಿತ ಯುವಕ ಯಶ್ ಕೆಲಸ ಹುಡುಕುತ್ತಿದ್ದಾನೆ, ಆತ ನಂಬಿಕಸ್ಥ” ಎಂದು ತಿಳಿಸಿದ್ದ. ಇದರಂತೆ ವಿನೋದ್ ಕುಮಾರ್ ಯಶ್‌ಗೆ ಅಂಗಡಿಯಲ್ಲಿ ಕೆಲಸ ನೀಡಿದ್ದರು. ಆದರೆ ಯಶ್‌ನಿಂದ ಯಾವುದೇ ಗುರುತಿನ ದಾಖಲೆಗಳನ್ನು ಪಡೆದಿರಲಿಲ್ಲ.

 ದೀಪಾವಳಿ ಪೂರ್ವ ಸಿದ್ಧತೆಯ ಅಂಗವಾಗಿ ಬುಧವಾರ ಅಂಗಡಿಯಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದಾಗ ಯಶ್ ಕೂಡ ಭಾಗಿಯಾಗಿದ್ದ. ನಂತರ ಆತ ಎರಡನೇ ಮಹಡಿಗೆ ತೆರಳಿ, ಅಲ್ಲಿ ಇಟ್ಟಿದ್ದ ಚಿನ್ನಾಭರಣವನ್ನು ಉಡುಪಿನೊಳಗೆ ಅಡಗಿಸಿಕೊಂಡು, ಅಂಗಡಿಯಿಂದ ನಾಪತ್ತೆಯಾಗಿದ್ದಾನೆ. ಅನಂತರ ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದು ಕಂಡುಬಂದಿದೆ.

 ಅಂಗಡಿ ಮಾಲೀಕರು ಹುಡುಕಾಟ ನಡೆಸಿದಾಗ ಶೌಚಾಲಯದ ಬಳಿ ಚಿನ್ನಾಭರಣದ ಖಾಲಿ ಪೆಟ್ಟಿಗೆಗಳು ಪತ್ತೆಯಾಗಿವೆ. ಬಳಿಕ ಸುರೇಂದ್ರನ ಮೊಬೈಲ್ ಸಂಖ್ಯೆಯೂ ಸ್ವಿಚ್ ಆಫ್ ಆಗಿರುವುದು ಗಮನಕ್ಕೆ ಬಂದಿದೆ. ಪ್ರಾಥಮಿಕ ಪರಿಶೀಲನೆ ವೇಳೆ ಸುಮಾರು 1.93 ಕಿಲೋಗ್ರಾಂ (₹1.31 ಕೋಟಿ ಮೌಲ್ಯದ) ಚಿನ್ನ ಕಳವಾಗಿದೆ ಎಂಬುದು ದೃಢಪಟ್ಟಿದೆ.

 ಘಟನೆಯ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಹಾಗೂ ಉಪವಿಭಾಗದ ಪೊಲೀಸ್ ಅಧಿಕಾರಿ ಲಕ್ಷ್ಮಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಗಳ ಪತ್ತೆಗೆ ಹಲವು ತಂಡಗಳನ್ನು ರಚಿಸಲಾಗಿದ್ದು, ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 3
Angry Angry 0
Sad Sad 0
Wow Wow 0