ಪತ್ನಿಯ ಫೋನ್ ನಂಬರ್, ಓಟಿಪಿ ಪಡೆದ ಸರ್ಕಾರಿ ನೌಕರರ ಮೇಲೆ ಹಲ್ಲೆ, ಆರೋಪಿ ಪತಿ ಬಂಧನ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವೇಳೆ ಘಟನೆ

Oct 25, 2025 - 13:55
 0  1.1k
ಪತ್ನಿಯ ಫೋನ್ ನಂಬರ್, ಓಟಿಪಿ ಪಡೆದ ಸರ್ಕಾರಿ ನೌಕರರ ಮೇಲೆ ಹಲ್ಲೆ, ಆರೋಪಿ ಪತಿ ಬಂಧನ:  ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವೇಳೆ ಘಟನೆ
Photo credit: The Indian express

ಬೆಂಗಳೂರು, ಅ.25: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ತೆರಳಿದ ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸಿದ ಘಟನೆ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಅಸ್ಟಿನ್‌ಟೌನ್ ನಿವಾಸಿ ಸ್ಟಿಫನ್ ಅಲಿಯಾಸ್ ಅನಿಲ್ (29) ಎಂದು ಗುರುತಿಸಲಾಗಿದೆ. ಫುಡ್‌ ಡೆಲಿವರಿ ಬಾಯ್‌ ಆಗಿರುವ ಆತ, ಕೆಎಸ್‌ಐಸಿಯ ಕಿರಿಯ ಸಹಾಯಕ ಅಭಿಷೇಕ್ ಹಾಗೂ ಅವರ ಸಹಾಯಕ ಪೆದ್ದಯ್ಯ ಅವರ ಮೇಲೆ ಹಲ್ಲೆ ನಡೆಸಿದ್ದಾನೆ.

ಪೊಲೀಸರ ಪ್ರಕಾರ, ಅಕ್ಟೋಬರ್ 9ರಂದು ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಯ ಅಂಗವಾಗಿ ಅಭಿಷೇಕ್ ಹಾಗೂ ಪೆದ್ದಯ್ಯ ಅಸ್ಟಿನ್‌ಟೌನ್‌ನ ಶಾಂತಲಾ ವಾರ್ಡ್‌ನಲ್ಲಿ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದರು. ಈ ವೇಳೆ ಸಮೀಕ್ಷಾ ಪ್ರಕ್ರಿಯೆಯ ಭಾಗವಾಗಿ ಸ್ಟಿಫನ್ ಅವರ ಪತ್ನಿಯ ಮೊಬೈಲ್ ನಂಬರ್ ಹಾಗೂ ಓಟಿಪಿ ಪಡೆದು ದಾಖಲೆ ಮಾಡಿಕೊಳ್ಳಲಾಗಿತ್ತು.

ಈ ವಿಷಯ ತಿಳಿದ ಸ್ಟಿಫನ್, ಅಕ್ಟೋಬರ್ 10ರಂದು ಮನೆ ಸಮೀಪದಲ್ಲೇ ಸಮೀಕ್ಷೆ ಕಾರ್ಯದಲ್ಲಿದ್ದ ಅಧಿಕಾರಿಗಳ ಬಳಿ ಬಂದು “ನಾನು ಮನೆಯಲ್ಲಿ ಇಲ್ಲದಿರುವಾಗ ನನ್ನ ಪತ್ನಿಯ ಮೊಬೈಲ್ ನಂಬರ್ ಮತ್ತು ಓಟಿಪಿ ಯಾಕೆ ಪಡೆದುಕೊಂಡಿರಿ?” ಎಂದು ಪ್ರಶ್ನಿಸಿ ವಾಗ್ವಾದ ಆರಂಭಿಸಿದ್ದಾನೆ. ಅಧಿಕಾರಿಗಳು ಸಮೀಕ್ಷೆಯ ನಿಯಮ ಮತ್ತು ಪ್ರಕ್ರಿಯೆ ವಿವರಿಸಿ ಸಮಾಧಾನಪಡಿಸಲು ಪ್ರಯತ್ನಿಸಿದರೂ, ಆತ ಕೋಪಗೊಂಡು ತನ್ನ ಸ್ನೇಹಿತನ ಸಹಾಯದಿಂದ ಅಭಿಷೇಕ್‌ಗೆ ಕಪಾಳಮೋಕ್ಷ ಮಾಡಿದ್ದು, ಪೆದ್ದಯ್ಯನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ಈ ವೇಳೆ ಸ್ಟಿಫನ್ ತಾಯಿ ಗೀತಾ ಅಲಿಯಾಸ್ ಮಾರ್ಗರೇಟ್ ಕೂಡ ಸ್ಥಳಕ್ಕೆ ಬಂದು ಅಧಿಕಾರಿಗಳ ಮೇಲೆ ಅಸಭ್ಯ ಶಬ್ದಗಳನ್ನು ಬಳಕೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಅಭಿಷೇಕ್ ನೀಡಿದ ದೂರು ಆಧರಿಸಿ ಅಶೋಕನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಟಿಫನ್ ನನ್ನು ಬಂಧಿಸಲಾಗಿದೆ. ಆತನ ಸ್ನೇಹಿತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಗೀತಾಗೆ ನೋಟಿಸ್ ನೀಡಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 1
Love Love 1
Funny Funny 0
Angry Angry 2
Sad Sad 1
Wow Wow 0