State News

ಮೊಮ್ಮಗನ ಎದುರಲ್ಲೇ ಅಜ್ಜಿ ಹತ್ಯೆ; ಸಂಬಂಧಿಯಿಂದಲೇ ಕೊಲೆ ಶಂಕೆ

admincoorgdaily

Photo credit: TV09(ಕೊಲೆಯಾದ ವೃದ್ಧೆ)

ನೆಲಮಂಗಲ, ಜ. 12: ಬೆಂಗಳೂರು ಉತ್ತರ ತಾಲೂಕಿನ ನೆಲಮಂಗಲ ಸಮೀಪದ ಕುದುರಗೆರೆ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ 55 ವರ್ಷದ ಮಹಿಳೆಯನ್ನು ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ ಘಟನೆ ನಡೆದಿದೆ. ಮೊಮ್ಮಗನ ಎದುರಲ್ಲೇ ಈ ಭೀಕರ ಕೃತ್ಯ ನಡೆದಿದ್ದು, ಆರೋಪಿ ಪರಾರಿಯಾಗಿದ್ದಾನೆ.

ಹತ್ಯೆಗೆ ಒಳಗಾದವರು ದ್ರಾಕ್ಷಾಣಮ್ಮ (55). ಅವರ ಪತಿ ನಾಗರಾಜು ಎಂಟು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಮಧ್ಯಾಹ್ನ ಮೊಮ್ಮಗನನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರುತ್ತಿದ್ದ ವೇಳೆ ಗ್ರಾಮದ ನಡು ರಸ್ತೆಯಲ್ಲಿ ದುಷ್ಕರ್ಮಿ ದಾಳಿ ನಡೆಸಿದ್ದಾನೆ. ತೀವ್ರ ಗಾಯಗೊಂಡ ದ್ರಾಕ್ಷಾಣಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಣಕಾಸು ವಿಚಾರಕ್ಕೆ ಸಂಬಂಧಿಸಿದ ವೈಮನಸ್ಸಿನಿಂದ ಸಂಬಂಧಿಯೊಬ್ಬರಿಂದಲೇ ಕೊಲೆ ನಡೆದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮಾಹಿತಿ ಪಡೆದ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.