ಮರಗೋಡು; ಐತಿಹಾಸಿಕ ಹಿಂದೂ ಸಂಗಮಕ್ಕೆ ಭರ್ಜರಿ ಸಿದ್ಧತೆ

Feb 17, 2026 - 23:22
Feb 17, 2026 - 23:23
 0  267
ಮರಗೋಡು; ಐತಿಹಾಸಿಕ ಹಿಂದೂ ಸಂಗಮಕ್ಕೆ ಭರ್ಜರಿ ಸಿದ್ಧತೆ

ಮರಗೋಡು: ಧರ್ಮ, ಸಂಸ್ಕೃತಿ, ಕುಟುಂಬ ಮೌಲ್ಯಗಳು ಹಾಗೂ ರಾಷ್ಟ್ರಭಕ್ತಿಯ ಸಂದೇಶವನ್ನು ಜನತೆಗೆ ತಲುಪಿಸುವ ಮಹತ್ವದ ಉದ್ದೇಶದೊಂದಿಗೆ ಹಿಂದು ಸಂಗಮ ಆಯೋಜನಾ ಸಮಿತಿಯ ವತಿಯಿಂದ ಫೆಬ್ರವರಿ 21ರಂದು ಮರಗೋಡುನಲ್ಲಿ ಭವ್ಯ ಹಿಂದು ಸಂಗಮ ಮಹಾಸಮಾವೇಶ ನಡೆಯಲಿದೆ.

ಈ ಐತಿಹಾಸಿಕ ಧಾರ್ಮಿಕ–ಸಾಂಸ್ಕೃತಿಕ ಉತ್ಸವಕ್ಕೆ ಮರಗೋಡು ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮಗಳು ಹಾಗೂ ವಿವಿಧ ಭಾಗಗಳಿಂದ ಸಾವಿರಾರು ಜನರು ಆಗಮಿಸುವ ನಿರೀಕ್ಷೆಯಿದೆ.

ಬೆಳಿಗ್ಗೆ 9.30 ಗಂಟೆಗೆ ಮರಗೋಡು ಪ್ರೌಢ ಶಾಲಾ ಮೈದಾನದಿಂದ ಭವ್ಯ ಶೋಭಾಯಾತ್ರೆ ಆರಂಭವಾಗಲಿದ್ದು, ವಿವಿಧ ಸ್ಥಳಗಳಿಂದ ಜನರು ಸೇರಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿವಿಧ ಸಂಘ ಸಂಸ್ಥೆಗಳ ಮಹಿಳೆಯರು ಕಳಸ ಹೊತ್ತು ಸಂಪ್ರದಾಯಬದ್ಧವಾಗಿ ಸಾಗಲಿದ್ದು, ಸಮಾಜದ ಏಕತೆ ಹಾಗೂ ಸಂಸ್ಕೃತಿಯ ಶಕ್ತಿಯನ್ನು ಪ್ರತಿಬಿಂಬಿಸಲಿದ್ದಾರೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬಿಂಬಿಸುವ ವೈವಿಧ್ಯಮಯ ಟ್ಯಾಬ್ಲೋ ವಾಹನಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಲಿದ್ದು, ಮಕ್ಕಳ ಛದ್ಮವೇಷ ಪ್ರದರ್ಶನ ಜನಮನ ಸೆಳೆಯಲಿದೆ.

ಕೇರಳದ ಪ್ರಸಿದ್ಧ ಚಂಡೆ ವಾದ್ಯದ ಗಂಭೀರ ನಾದ ಮರಗೋಡು ಪಟ್ಟಣದ ರಸ್ತೆಗಳಲ್ಲಿ ಪ್ರತಿಧ್ವನಿಸಿ ಭಕ್ತಿ ಹಾಗೂ ಸಂಭ್ರಮದ ವಾತಾವರಣ ನಿರ್ಮಿಸಲಿದೆ. ಸಮಾಜದ ಒಗ್ಗಟ್ಟು, ಪರಿಸರ ಸಂರಕ್ಷಣೆ, ಕುಟುಂಬ ಮೌಲ್ಯಗಳ ರಕ್ಷಣೆ, ರಾಷ್ಟ್ರೀಯ ಏಕತೆ ಹಾಗೂ ಸ್ವಾವಲಂಬಿ ಜೀವನ ಶೈಲಿಯಂತಹ ಮಹತ್ವದ ಸಂದೇಶಗಳನ್ನು ಈ ಹಿಂದು ಸಂಗಮದ ಮೂಲಕ ಜನತೆಗೆ ತಲುಪಿಸಲಾಗುವುದು ಎಂದು ಆಯೋಜನ ಸಮಿತಿಯವರು ತಿಳಿಸಿದ್ದಾರೆ.

ಶೋಭಾಯಾತ್ರೆ ನಂತರ ನಡೆಯುವ ಮುಖ್ಯ ಸಭಾ ಕಾರ್ಯಕ್ರಮವು ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದ್ದು, ಇಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಂದೇಶಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಮಾಜದ ಏಕತೆಯನ್ನು ಬಲಪಡಿಸುವ ವಿಚಾರಗಳು ನಡೆಯಲಿವೆ.

ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 12.30 ಗಂಟೆಗೆ ಸಾವಿರಾರು ಜನರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿದ್ದು, ಸೇವೆ ಹಾಗೂ ಸಂಸ್ಕೃತಿಯ ಸಂಯೋಜನೆಯೊಂದಿಗೆ ನಡೆಯುವ ಈ ಉತ್ಸವ ಮರಗೋಡು ಇತಿಹಾಸದಲ್ಲೇ ಸ್ಮರಣೀಯ ಧಾರ್ಮಿಕ ಕಾರ್ಯಕ್ರಮವಾಗಿ ರೂಪುಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ. 

ವರದಿ;ಅಶೋಕ್_ಮಡಿಕೇರಿ

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0