ಬೇಟೆಗಾರರ ಮೇಲೆ ಗುಂಡೇಟು: ಅರಣ್ಯ ಇಲಾಖೆಯ ಮಿಂಚಿನ ಕಾರ್ಯಾಚರಣೆ: 2 ಮಂದಿಗೆ ಗಾಯ, 266 ಕೆಜಿ ಕಾಡುಕೋಣ ಮಾಂಸ ವಶ
admincoorgdaily

ಮಡಿಕೇರಿ; ಕಾಡುಕೋಣ ಬೇಟೆಯಾಡಲು ಬಂದಿದ್ದ ಬೇಟೆಗಾರರನ್ನು ತಡೆಯಲು ಹೋದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಜೀಪ್ ಹತ್ತಿಸಲು ಯತ್ನಿಸಿದಾಗ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಬೇಟೆಗಾರರು ಗಾಯಗೊಂಡಿರುವ ಘಟನೆ ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರು ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಅರಣ್ಯ ಇಲಾಖೆ ಸಿಬ್ಬಂದಿಗೆ ಕಾಡುಕೋಣ ಬೇಟೆಯಾಡಿ ಬರುತ್ತಿದ್ದ ಬೇಟೆಗಾರರ ಬಗ್ಗೆ ಮಾಹಿತಿ ಲಭಿಸಿತ್ತು. ಸ್ಥಳಕ್ಕೆ ತೆರಳಿದ ಸಿಬ್ಬಂದಿ ಬೇಟೆಗಾರರ ಜೀಪ್ ಅನ್ನು ತಡೆಯಲು ಮುಂದಾದರು. ಈ ವೇಳೆ ಬೇಟೆಗಾರರು ಸಿಬ್ಬಂದಿ ಮೇಲೆ ಜೀಪ್ ಹತ್ತಿಸಲು ಯತ್ನಿಸಿದರು. ಆತ್ಮರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಜುಬೇರ್ ಮತ್ತು ಯಾಕೂಬ್ ಎಂಬ ಇಬ್ಬರಿಗೆ ತೀವ್ರ ಗಾಯಗಳಾಗಿವೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾಯಾಳುಗಳನ್ನು ಕೂಡಲೇ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳದಲ್ಲಿ ಆರೋಪಿಗಳಿಂದ 266 ಕೆಜಿ ಕಾಡುಕೋಣ ಮಾಂಸ ಮತ್ತು ಮಾರಕಾಸ್ತ್ರಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ. ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ DCF ಅಭಿಷೇಕ್ ಅವರು, ಅರಣ್ಯ ಸಂಪನ್ಮೂಲ ರಕ್ಷಣೆಗಾಗಿ ಇಲಾಖೆ ಇನ್ನಷ್ಟು ಕಟ್ಟೆಚ್ಚರ ವಹಿಸಲಿದೆ ಎಂದು ತಿಳಿಸಿದ್ದಾರೆ.