ಅಮ್ಮತ್ತಿಯಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ಆಶ್ರಯದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮ
ವಿರಾಜಪೇಟೆ:ದೇಶದ ಐಕ್ಯತೆಗೆ ಕುಟುಂಬ ಜೀವನ ಕಾರಣ. ಹಿಂದೂ ಸಂಗಮದ ಹೊಸ ಮನ್ವಂತರಕ್ಕೆ ಇಂದು ಇಲ್ಲಿ ಸಾಕ್ಷಿಯಾಗಿದೆ. ಮೂರು ಅಕ್ಷರಗಳಲ್ಲಿಯೇ ಸಮರ್ಥ ಸತ್ವ ಹೊಂದಿರುವ ಸದೃಢ ದೇಶ ಭಾರತ. ಎಲ್ಲಾ ಜನರನ್ನು, ಮನಸ್ಸನ್ನು ಬೆಸೆಯುವ ಮೂಲಕ ಹಿಂದೂ ಧರ್ಮದ ಅಭಿಮಾನವನ್ನು ಜನರಿಗೆ ತಲುಪಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕದ ದಕ್ಷಿಣ ಕರ್ನಾಟಕ ಪ್ರಾಂತ ಸಹ ಕಾರ್ಯವಾಹಕ ಪಿ.ಎಸ್. ಪ್ರಕಾಶ್ ಕರೆ ನೀಡಿದರು.
ಅಮ್ಮತ್ತಿಯಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ಆಶ್ರಯದಲ್ಲಿ ಕೊಡವ ಸಮಾಜದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಶತಮಾನೋತ್ಸವ ಆಚರಿಸುತ್ತಿರುವ ರಾಷ್ಟೀಯ ಸ್ವಯಂ ಸೇವಕ ಸಂಘ, ತನ್ನ ಕಾರ್ಯ ಯೋಜನೆಯಲ್ಲಿ ಹಿಂದೂ ಸಮಾಜೋತ್ಸವ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಖಂಡ ಹಿಂದೂ ಸಮಾಜ ದೇಶದಲ್ಲಿ ಹರಿದು ಹಂಚಿ ಹೋಗಿರುವುದನ್ನು ಒಗ್ಗೂಡಿಸುವ ಸಲುವಾಗಿ ಶೋಭಾಯಾತ್ರೆ ನಡೆಸಲಾಗುತ್ತಿದೆ. ಹಿಂದೂ ಸಮಾಜದವರು ಜಾತಿ ಬೇಧ ಮರೆತು ಸಂಘಟಿತರಾಗಿ ನಾವೆಲ್ಲ ಒಂದು ನಾವೆಲ್ಲ ಮುಂದು ಎನ್ನುವ ಮೂಲಕ, ಯುವಕರ ಪ್ರಜ್ಞೆ ಧರ್ಮದೆಡೆಗೆ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದರು.
ಪ್ರಸ್ತುತ ಹಿಂದೂ ಸಮಾಜ ಹೊರಗಿನ ಮತ್ತು ಒಳಗಿನ ಅತಂಕವನ್ನು ಎದುರಿಸುತ್ತಿದೆ. ನಾವು ಬಯಸದೇ ಇರುವ ಬದಲಾವಣೆ ಹಿಂದೂ ಸಮಾಜವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇದಕ್ಕೆ ನಾವೇ ಪರಿಹಾರ ಕಂಡುಕೊಳ್ಳಬೇಕು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಣ್ಣ ಮಾರ್ಗವೇ ಹಿಂದೂ ಸಂಗಮ ಎಂದರು. ಇದರಲ್ಲಿ ಉತ್ಸಾಹ ಇದೆ, ಆವೇಶ ಇಲ್ಲ. ಪ್ರಸ್ತುತ ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಂದ ಹೊರಗೆ ಬರಬೇಕಾದರೆ ನಾವು ಇನ್ನಷ್ಟು ದೃಢ ನಿರ್ಧಾರ ಕೈಗೊಳ್ಳಬೇಕಿದೆ. ನಮ್ಮ ಧರ್ಮ, ಸಂಸ್ಕೃತಿಯನ್ನು ಕಾಪಾಡಿಕೊಳ್ಳುವುದು ಇಂದಿನ ತುರ್ತು. ಜಗತ್ತಿನ ಎಲ್ಲ ಕ್ಷೇತ್ರಕ್ಕೂ ಕೊಡುಗೆ ನೀಡಿರುವುದು ಹಿಂದೂ ಸಮಾಜ ಎಂದು ಅಭಿಪ್ರಾಯಪಟ್ಟರು.
ಹಿಂದೂ ಅಂದರೆ ಯಾರು ಎನ್ನುವ ಪ್ರಶ್ನೆ ಇದೆ. ದೇಶದ ಹೆಸರಿನಿಂದ ಹಿಂದೂ ಅಂತ ಬಂದಿದೆ. ಹಿಂದೂಸ್ತಾನ್ ಇದ್ದದ್ದು ಭಾರತ, ಇಂಡಿಯಾ ಆಗಿದೆ. ಹಿಂದೂಸ್ತಾನದಲ್ಲಿ ಹುಟ್ಟಿದವರೆಲ್ಲ ಹಿಂದೂಗಳೇ. ಹಿಂದೂ ಎನ್ನುವುದು ನಾಗರೀಕತೆ, ಸಂಸ್ಕೃತಿ, ನಮ್ಮ ತಾಯಿ ಹಿಂದೂಸ್ತಾನ. ಈ ಕಾರಣದಿಂದ ನಾವೆಲ್ಲ ಹಿಂದೂಗಳಾಗಿದ್ದೇವೆ. ಅಂತಹ ಅದ್ಭುತ ದೇಶದಲ್ಲಿ ನಾವಿದ್ದೇವೆ. ಭಾರತ ಅಂದರೆ ನೆನಪಿಗೆ ಬರುವುದು ಧಾರ್ಮಿಕತೆಯೇ ಹೊರತು, ಯುದ್ದ ಅರಾಜಕತೆ ಅಲ್ಲ. ಜಗತ್ತು ಉಳಿಬೇಕಾದರೆ ಹಿಂದೂ ಸಮಾಜ ಉಳಿಬೇಕು. ಇಡೀ ವಿಶ್ವಕ್ಕೆ ಧಾರ್ಮಿಕತೆ ಕಲಿಸಿರುವುದು ನಮ್ಮ ದೇಶ.
ನಮ್ಮ ಕುಟುಂಬ, ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುವ ಜತೆಗೆ ಅನ್ನ ಕೊಡುವ ರೈತನಿಗೆ, ಗಡಿ ಕಾಯುವ ಸೈನಿಕನ ಪರವಾಗಿಯೂ ಪ್ರಾರ್ಥನೆ ಮಾಡಬೇಕು. ಯುವ ಸಮೂಹವನ್ನು ಸನ್ಮಾರ್ಗದತ್ತ ಕರೆದೊಯ್ಯುವ ಕೆಲಸವಾಗಬೇಕು. ಹಿಂದೂ ಸಮಾಜ ಮಲಗಿದರೆ ಎದ್ದೇಳುವುದು ಕಷ್ಟ. ದೇಶದ ಬುನಾದಿ ಕುಟುಂಬ. ಕುಟುಂಬ ಉಳಿಬೇಕಾದರೆ ಸಂಸ್ಕೃತಿ ಉಳಿಬೇಕು ಎಂದು ಹೇಳಿದರು.
ಭಾರತೀಯ ಸಂಸ್ಕೃತಿ ಮೇಲೆ ಹೇಗೆ ಪಾಶ್ಚಾತ್ಯ ಸಂಸ್ಕೃತಿ ಪ್ರಭಾವ ಬೀರುತ್ತಿದೆ ಅದರಿಂದ ಭಾರತೀಯ ಸಂಸ್ಕöÈತಿಯನ್ನು ಉಳಿಸಲು ಹಿಂದೂ ಸಂಗಮ ಅತೀ ಅಗತ್ಯ. ಮೇಲು-ಕೀಳು ಎನ್ನುವ ಅಹಂಕಾರ ಬಿಟ್ಟು ಎಲ್ಲರನ್ನೂ ನಮ್ಮವರು ಎಂದು ನೋಡಬೇಕು.
ಆರ್‌ಎಸ್‌ಎಸ್ ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಮಾಡಿದೆ. ವ್ಯಕ್ತಿ ನಿರ್ಮಾಣದಿಂದ ಸಂಘಟನೆ ಜೊತೆಗೆ ಸಮಾಜ ಬೆಳೆಯಿತು. ಹಾಗೂ ಇದರಿಂದ ರಾಷ್ಟç ಕಟ್ಟುವ ಕೆಲಸವಾಗಿದೆ. ಹಿಂದು ಸಂಗಮದಿಂದ ಹಿಂದೂ ಸಮಾಜಕ್ಕೆ ವಿಶ್ವಾಸ ಮೂಡಿದೆ.
ಕಲಿಯುಗದಲ್ಲಿ ನಾವು ಸಂಘಟಿತರಾಗಿ ಇಂದು ಸಮಾಜವನ್ನು ರಕ್ಷಿಸಬೇಕಿದೆ ಎಂದರು. ಸಂಘವು ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಮಾಜದಲ್ಲಿ ಪಂಚ ಪರಿವರ್ತನೆಗಳ ಅಗತ್ಯತೆ ಇದ್ದು, ಸಾಮಾಜಿಕ ಮೌಲ್ಯಗಳ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ, ಪರಿಸರದ ಸಂರಕ್ಷಣೆ ಸ್ವದೇಶಿ ಭಾವಗಳ ಜಾಗೃತಿ ಹಾಗೂ ನಾಗರಿಕ ಶಿಸ್ತು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕಾಗಿದೆ.ಹಿಂದೂ ಸಂಗಮದಿಂದಾಗಿ ಹಿಂದೂಗಳ ಮಧ್ಯೆ ಹೃದಯಗಳ ಬಂಧನವಾಗಬೇಕು. ಕಳೆದುಹೋದ ಸಂಸ್ಕೃತಿಯನ್ನು ಮತ್ತೆ ಮುಂದಿನ ಪೀಳಿಗೆಗೆ ಹೇಳಿಕೊಡುವಂತಾಗಬೇಕು ಎಂದರು.
ಕೊಡವ ಸಮಾಜದ ಅಧ್ಯಕ್ಷ ಐನಂಡ ಪ್ರಕಾಶ್ ಮಾತನಾಡಿ, ಜನಸಾಮಾನ್ಯರು ಹಿಂದುತ್ವದ ಜಾಗೃತಿ ಹಾಗೂ ದೇಶ ಭಕ್ತಿ ಹೊಂದುವಂತಾಗಬೇಕು. ಭಾರತ ಈಗಾಗಲೇ ಸಾಮಾಜಿಕವಾಗಿ ಸಂಪನ್ನತೆ ಹೊಂದಿದ್ದು, ಸಂರಕ್ಷಿತ ರಾಷ್ಟçವಾಗಿದೆ. ಜೊತೆಗೆ ಸಾಮರಸ್ಯದ ಭಾವ ಹೊಂದಿದೆ ಹಿಂದೂ ಸಮಾಜದ ಸಂಘಟನೆ, ಸ್ವಾವಲಂಭಿ, ಸಂಸ್ಕಾರಯುಕ್ತ ಮತ್ತು ಸಾಮರಸ್ಯಯುಕ್ತ ಸಮಾಜವನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ನಿರತರಾಗಬೇಕು. ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸುವುದಲ್ಲದೇ ನಮ್ಮ ಧರ್ಮ, ಸಂಸ್ಕೃತಿ, ಮೌಲ್ಯಗಳನ್ನು ಆಚರಣೆಗೆ ತರುವಲ್ಲಿ ಜಾಗೃತಿಯ, ಶಕ್ತಿಯ ಕೇಂದ್ರವಾಗಬೇಕು. ವ್ಯಕ್ತಿಯು ತನ್ನ, ಕುಟುಂಬದ ಮತ್ತು ಸಮಾಜದ ನಡವಳಿಕೆಯಲ್ಲಿ ಪರಿವರ್ತನೆಯನ್ನು ತರುವಲ್ಲಿ ಜವಾಬ್ದಾರಿಯ ಪಾತ್ರವನ್ನು ನಿರ್ವಹಿಸಬೇಕು. ಕುಟುಂಬದಲ್ಲಿ ಸಂಸ್ಕೃತಿ, ಸಂಸ್ಕಾರಗಳ ಸಂವರ್ಧನೆ, ಸಮಾಜದ ಎಲ್ಲರೊಂದಿಗೆ ಸಾಮರಸ್ಯದ ಭಾವ, ನಾಗರಿಕ ಕರ್ತವ್ಯಗಳನ್ನು ನಿತ್ಯ ಪಾಲಿಸಬೇಕು. ಹಿಂದೂಧರ್ಮ, ಸಂಸ್ಕೃತಿಗಳ ಸಂರಕ್ಷಣೆ, ಸ್ವಾವಲಂಬನೆ ಮತ್ತು ಸಮಗ್ರ ವಿಕಾಸದ ದೃಷ್ಟಿಯಿಂದ ಜಾಗೃತ ಹಿಂದೂ ಸಮಾಜ ಕಟಿಬದ್ಧವಾಗಬೇಕು ಎಂಬ ಆಶಯದೊಂದಿಗೆ ಹಿಂದೂ ಸಮಾಜದ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಇತ್ತಿಚೆಗೆ ನಮ್ಮ ಕೊಡಗಿನಲ್ಲಿ ಅಸ್ಸಾಂನವರು ಎನ್ನುತ್ತಾ ಬಾಂಗ್ಲಾದವರು ಸೇರಿಕೊಂಡಿದ್ದಾರೆ. ತೋಟದ ಲೈನ್‌ಮನೆಗಳಲ್ಲಿ ಸೇರಿದಂತೆ ಎಲ್ಲ ಕಡೆ ಅವರು ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೆ ಇಲ್ಲಿ ಆಧಾರ್ ಕಾರ್ಡ್, ಮತದಾರರ ಚೀಟಿ ಎಲ್ಲ ದಾಖಲಾತಿಗಳನ್ನು ನಮ್ಮವರೇ ಮಾಡಿಕೊಡುತ್ತಿರುವುದು ಕಳವಳಕಾರಿಯಾಗಿದೆ. ಹಿಂದೆ ಬ್ರಿಟಿಷರು ಹೀಗೆ ಸೇರಿಕೊಂಡು ನಮ್ಮ ದೇಶವನ್ನು ಅಧೋಗತಿಗೆ ತಂದ ಹಾಗೆ ನಮ್ಮ ಕೊಡಗು ಬಾಂಗ್ಲಾದವರಿಂದ ನಲುಗಿ ಹೋಗುವ ಕಾಲ ದೂರವಿಲ್ಲ. ಹಾಗಾಗಿ ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಚೌಡೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಹೆಚ್.ಕೆ. ಶ್ರೀನಿವಾಸ್ ಮಾತನಾಡಿ ನಾವೆಲ್ಲ ಹಿಂದೂ, ನಾವೆಲ್ಲ ಒಂದು. ಕೆಲವರು ಹಿಂದೂ ಅಂತ ಹೇಳೋಕೆ ಹಿಂದೆ ಸರಿಯುತ್ತಾರೆ. ಹಿಂದೂ ಸಮುದಾಯದಲ್ಲಿರುವವರಿಗೆ ಹಿಂದೂ ಅಂತ ಹೇಳೋಕೆ ಭಯ ಯಾಕೆ. ಕಾವೇರಮ್ಮನ ಮಣ್ಣಿನಲ್ಲಿ ಹುಟ್ಟಿದ ನಾವು ಕಾವೇರಿ ಹರಿದ ಹಾಗೆ ದೇಶವ್ಯಾಪಿ ನಮ್ಮ ಹಿಂದೂತ್ವವನ್ನು ಹರಿಯಬಿಡಬೇಕು. ಎಲ್ಲಾ ಹಿಂದೂ ಬಾಂಧವರು ಈ ಸಮಾಜೋತ್ಸವದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಬೇಕು. ತನ್ಮೂಲಕ ಸಮಾಜದ ಜಾಗೃತಿಯ ಈ ಕಾರ್ಯಕ್ರಮದಲ್ಲಿ ತಮ್ಮ ಪಾತ್ರವನ್ನು ಅರಿತುಕೊಳ್ಳಬೇಕು. ಪ್ರತಿಯೊಬ್ಬರೂ ನಮ್ಮ ಧರ್ಮಗ್ರಂಥ ಭಗವದ್ಗೀತೆ ಬಗ್ಗೆ ಮಕ್ಕಳಿಗೆ ಕಲಿಸಿಕೊಡಬೇಕು ಎಂದು ಕೋರಿದರು.
ಹಿಂದೂ ಸಂಗಮದ ಅಂಗವಾಗಿ ಅಮ್ಮತ್ತಿ ಪಟ್ಟಣದಲ್ಲಿ ಬೃಹತ್‌ಮಟ್ಟದಲ್ಲಿ ವೈಭವದ ಶೋಭಾಯಾತ್ರೆ ನಡೆಯಿತು. ಸಹಸ್ರ ಸಂಖ್ಯೆಯಲ್ಲಿ ಹಿಂದೂ ಭಾಂದವರು ಮೆರವಣಿಗೆಗೆ ಸಾಕ್ಷಿಗಳಾದರು. ಮೆರವಣಿಗೆ ಅಮ್ಮತ್ತಿ ಪಟ್ಟಣದ ಪ್ರಮುಖ ರಸ್ತೆಯುದ್ದಕ್ಕೂ ಸಂಚರಿಸಿ ಕೊಡವ ಸಮಾಜದವರೆಗೂ ಸಾಗಿ ಬಂತು. ವಿವಿಧ ಭಜನಾ ನೃತ್ಯ, ದುಡಿಕೊಟ್ಟ್ ಪಾಟ್, ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿ, ದೀಪ ಪ್ರಜ್ವಲನೆಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಸ್ವಾಗತ ನೃತ್ಯ, ಚಂಡೆ ವಾದ್ಯ, ದುಡಿಕೊಟ್ಟ್ ಪಾಟ್, ಕೊಡವ ವಾಲಗ, ಚೀನಿ ದುಡಿ, ಬೊಳಕಾಟ್, ಭಜನಾ ನೃತ್ಯ ಪ್ರದರ್ಶನ ಮಾಡಲಾಯಿತು.
ನೆಲ್ಲಮಕ್ಕಡ ಸಾಗರ್ ಸಾಮರಸ್ಯ ಗೀತೆ ಹಾಡಿದರು. ವೇದಿಕೆಯಲ್ಲಿ ಶ್ರೀ ಅಯ್ಯಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಕುಟ್ಟಂಡ ಸಂಜು, ಕಾವಾಡಿ ಶ್ರೀ ಭಗವತಿ ದೇವಸ್ಥಾನದ ಅಧ್ಯಕ್ಷ ಮುಕ್ಕಾಟಿರ ನಾಚಪ್ಪ, ಮುತ್ತಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಸಿ.ಕೆ. ರವಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಸುವಿನ್ ಗಣಪತಿ, ಕುಟ್ಟಂಡ ಪ್ರಿನ್ಸ್ ಗಣಪತಿ, ಚಂದ್ರನ್, ವಿಶಾಲಾಕ್ಷಿ, ಎಂ.ಡಿ ಚಿಣ್ಣಪ್ಪ ಸೇರಿದಂತೆ ಗ್ರಾಮದ ಹಿಂದೂ ಬಾಂಧವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.