ಫುಡ್ ಡೆಲಿವರಿ ನೆಪದಲ್ಲಿ ಮನೆ ದರೋಡೆ: ಸತ್ತಂತೆ ನಟಿಸಿ ಪ್ರಾಣ ಉಳಿಸಿಕೊಂಡ ವೃದ್ಧೆ! ಕೆಲಸ ಕೊಟ್ಟ ಮನೆಗೆ ಕನ್ನ ಹಾಕಿದ ಮಾಜಿ ಚಾಲಕ

Oct 22, 2025 - 11:59
 0  1.5k
ಫುಡ್ ಡೆಲಿವರಿ ನೆಪದಲ್ಲಿ ಮನೆ ದರೋಡೆ: ಸತ್ತಂತೆ ನಟಿಸಿ ಪ್ರಾಣ ಉಳಿಸಿಕೊಂಡ ವೃದ್ಧೆ!  ಕೆಲಸ ಕೊಟ್ಟ ಮನೆಗೆ ಕನ್ನ ಹಾಕಿದ ಮಾಜಿ ಚಾಲಕ
Photo credit: Asaint news

ಬೆಂಗಳೂರು, ಅ. 22: ಬನಶಂಕರಿ ಮೂರನೇ ಹಂತದ ಸಿಂಡಿಕೇಟ್ ಬ್ಯಾಂಕ್ ಕಾಲೋನಿಯಲ್ಲಿ ನಡೆದ ಭೀಕರ ದರೋಡೆ ಪ್ರಕರಣವು ಆತಂಕ ಮೂಡಿಸಿದೆ. ಮಾಜಿ ಚಾಲಕನೇ ತನ್ನ ಸಹಚರರೊಂದಿಗೆ Zomato ಡೆಲಿವರಿ ಬಾಯ್ ವೇಷದಲ್ಲಿ ಬಂದು, ವೃದ್ಧೆಯೊಬ್ಬರ ಮೇಲೆ ಚಾಕುವಿನಿಂದ ದಾಳಿ ನಡೆಸಿ ₹8.5 ಲಕ್ಷ ನಗದು ದೋಚಿದ ಘಟನೆ ನಡೆದಿದೆ. ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಚಾಕು ಇರಿತಕ್ಕೊಳಗಾದ 65 ವರ್ಷದ ಕನಕಪುಷ್ಪಮ್ಮ ಅವರು ಧೈರ್ಯ ಪ್ರದರ್ಶಿಸಿ ಸತ್ತಂತೆ ನಟಿಸುವ ಮೂಲಕ ಪ್ರಾಣ ಉಳಿಸಿಕೊಂಡಿದ್ದಾರೆ. ಸ್ಥಳೀಯರ ಸಹಕಾರದಿಂದ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ವೃದ್ಧೆ ಕನಕಪುಷ್ಪಮ್ಮ ಅವರು ತಮ್ಮ ಮಗ ರಾಹುಲ್ ಜೊತೆ ಬನಶಂಕರಿಯಲ್ಲಿ ವಾಸಿಸುತ್ತಿದ್ದರು. ರಾಹುಲ್ ರಿಯಲ್ ಎಸ್ಟೇಟ್ ವಲಯದಲ್ಲಿ ತೊಡಗಿಸಿಕೊಂಡಿದ್ದು, ಮನೆ ಮತ್ತು ವಾಹನದ ಕೆಲಸಕ್ಕಾಗಿ ಮಡಿವಾಳ ಅಲಿಯಾಸ್ ಮ್ಯಾಡಿ ಎಂಬವನನ್ನು ಚಾಲಕನಾಗಿ ನೇಮಿಸಿದ್ದರು. ನಾಲ್ಕು ತಿಂಗಳು ಕೆಲಸ ಮಾಡಿದ ನಂತರ ಕೆಲಸ ಬಿಟ್ಟ ಮಡಿವಾಳ, ಮನೆಯಲ್ಲಿ ಸಂಗ್ರಹಿಸಿದ್ದ ಹಣ ಮತ್ತು ಮನೆಯ ಒಳಗಿನ ವಿವರಗಳನ್ನು ಚೆನ್ನಾಗಿ ತಿಳಿದ ಬಳಿಕ ದರೋಡೆ ಯೋಜನೆ ರೂಪಿಸಿದ್ದಾನೆ.

ಘಟನೆಯ ದಿನ ರಾತ್ರಿ, ಮಡಿವಾಳ ತನ್ನ ಸಹಚರರಾದ ವಿಠಲ್, ಗುರು ಹಾಗೂ ಗಣೇಶ್‌ ರೊಂದಿಗೆ zomato ಡೆಲಿವರಿ ಬಾಯ್ ರೀತಿ ಮನೆ ಬಾಗಿಲು ತಟ್ಟಿದ್ದರು. ಬಾಗಿಲು ತೆರೆಯುತ್ತಿದ್ದಂತೆಯೇ ವೃದ್ಧೆಯ ಮೇಲೆ ಚಾಕುವಿನಿಂದ ದಾಳಿ ನಡೆಸಿ, ಕುತ್ತಿಗೆಗೆ ಎರಡು ಬಾರಿ ಇರಿದರು. ಸತ್ತುಬಿದ್ದಂತೆ ನಟಿಸಿದ ಕನಕಪುಷ್ಪಮ್ಮ ಅವರು ಜೀವ ಉಳಿಸಿಕೊಂಡರು. ಬಳಿಕ ಆರೋಪಿಗಳು ಮನೆಯಲ್ಲಿದ್ದ ₹8.5 ಲಕ್ಷ ನಗದು ದೋಚಿ ಪರಾರಿಯಾದರು.

ವೃದ್ಧೆಯ ಕೂಗಾಟ ಕೇಳಿ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ, ಆರೋಪಿ ಗಣೇಶ್‌ ನನ್ನು ಸ್ಥಳದಲ್ಲೇ ಹಿಡಿದು ಪೊಲೀಸರಿಗೆ ಒಪ್ಪಿಸಿದರು. ವಿಚಾರಣೆಯ ವೇಳೆ ಉಳಿದ ಆರೋಪಿಗಳ ವಿವರ ಪತ್ತೆಯಾಗಿ, ಬನಶಂಕರಿ ಪೊಲೀಸರು ಮಡಿವಾಳ, ವಿಠಲ್ ನನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಗುರು ಪರಾರಿಯಾಗಿದ್ದು, ಅವನಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಗಂಭೀರ ಗಾಯಗೊಂಡ ಕನಕಪುಷ್ಪಮ್ಮ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

What's Your Reaction?

Like Like 0
Dislike Dislike 0
Love Love 1
Funny Funny 1
Angry Angry 0
Sad Sad 0
Wow Wow 1