ಟೆಲಿಗ್ರಾಂ ಮೂಲಕ ಹನಿಟ್ರ್ಯಾಪ್‌–ಸುಲಿಗೆ: ಆರ್‌ಆರ್ ನಗರದಲ್ಲಿ ಐವರ ಬಂಧನ

Dec 24, 2025 - 18:59
Dec 25, 2025 - 10:16
 0  611
ಟೆಲಿಗ್ರಾಂ ಮೂಲಕ ಹನಿಟ್ರ್ಯಾಪ್‌–ಸುಲಿಗೆ: ಆರ್‌ಆರ್ ನಗರದಲ್ಲಿ ಐವರ ಬಂಧನ
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ. 24: ಟೆಲಿಗ್ರಾಂ ಸಾಮಾಜಿಕ ಜಾಲತಾಣವನ್ನು ಉಪಯೋಗಿಸಿ ಯುವಕರನ್ನು ಮೋಸದ ಬಲೆಗೆ ಬೀಳಿಸಿ ಸುಲಿಗೆ ನಡೆಸುತ್ತಿದ್ದ ಗ್ಯಾಂಗ್‌ನ ಇಬ್ಬರು ಯುವತಿಯರು ಸೇರಿ ಐವರನ್ನು ಆರ್‌ಆರ್ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಸುಮಲತಾ ಅಲಿಯಾಸ್ ಅಂಜಲಿ (28), ಹರ್ಷಿಣಿ ಅಲಿಯಾಸ್ ಸ್ವೀಟಿ (26), ಜಗದೀಶ್ (35), ಮಂಜುನಾಥ್ (30) ಹಾಗೂ ಲೋಕೇಶ್ (32) ಎಂದು ಗುರುತಿಸಲಾಗಿದೆ.

ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ನೀಡಿದ ದೂರಿನ ಆಧಾರದಲ್ಲಿ ತನಿಖೆ ಕೈಗೊಂಡ ಪೊಲೀಸರು, ಟೆಲಿಗ್ರಾಂ ಗ್ರೂಪ್‌ಗಳ ಮೂಲಕ ಯುವಕರನ್ನು ಸಂಪರ್ಕಿಸಿ, ಆನ್‌ಲೈನ್‌ನಲ್ಲಿ ಹುಡುಗಿಯರನ್ನು ‘ಬುಕ್’ ಮಾಡುವಂತೆ ಪ್ರೇರೇಪಿಸಿ ನಂತರ ಸುಲಿಗೆ ನಡೆಸುತ್ತಿದ್ದ ಸಂಘಟಿತ ಜಾಲವನ್ನು ಪತ್ತೆಹಚ್ಚಿದ್ದಾರೆ.

ಡಿಸೆಂಬರ್ 1ರಂದು ಟೆಲಿಗ್ರಾಂ ಮೂಲಕ ಹುಡುಗಿಯನ್ನು ಸಂಪರ್ಕಿಸಿದ್ದ ಯುವಕ, ಆಕೆ ನೀಡಿದ ವಿಳಾಸಕ್ಕೆ ತೆರಳಿದ್ದಾನೆ. ಮನೆಯೊಳಗೆ ಪ್ರವೇಶಿಸಿದ ನಂತರ ಯುವತಿ 20 ಸಾವಿರ ರೂ. ನಗದು ಹಾಗೂ ಮೊಬೈಲ್‌ನ್ನು ಕಸಿದುಕೊಂಡು, 1 ಲಕ್ಷ ರೂ. ನೀಡದಿದ್ದರೆ ತನ್ನ ಸಹಚರರನ್ನು ಕರೆಸುವುದಾಗಿ ಬೆದರಿಕೆ ಹಾಕಿದ್ದಾಳೆ. ಯುವಕ ಸಮಯಪ್ರಜ್ಞೆ ತೋರಿಸಿ ಮೊಬೈಲ್ ವಾಪಸ್ ಪಡೆದು ಸ್ಥಳದಿಂದ ಪಾರಾಗಿದ್ದಾನೆ.

ಇದಾದ ಬಳಿಕವೂ ಡಿಸೆಂಬರ್ 20ರಂದು ಯುವಕ ಮತ್ತೊಮ್ಮೆ ಟೆಲಿಗ್ರಾಂ ಮೂಲಕ ಹುಡುಗಿಯನ್ನು ಸಂಪರ್ಕಿಸಿದ್ದಾನೆ. ಆಕೆ ಸೂಚಿಸಿದ ಸ್ಥಳಕ್ಕೆ ತೆರಳಿದಾಗ, ಹಿಂದಿನ ಯುವತಿ, ಮತ್ತೊಬ್ಬ ಯುವತಿ ಹಾಗೂ ಮೂವರು ಯುವಕರು ಏಕಾಏಕಿ ಆಗಮಿಸಿ ಯುವಕನ ಮೇಲೆ ಹಲ್ಲೆ ನಡೆಸಿ 20 ಸಾವಿರ ರೂ. ಕಸಿದುಕೊಂಡಿದ್ದಾರೆ. ಜೊತೆಗೆ 1 ಲಕ್ಷ ರೂ. ನೀಡುವಂತೆ ಒತ್ತಾಯಿಸಿ ಅಪಹರಣಕ್ಕೆ ಯತ್ನಿಸಿದ್ದಾರೆ.

ಯುವಕ ಕೂಗಿಕೊಂಡ ಪರಿಣಾಮ ಸ್ಥಳೀಯರು ತಕ್ಷಣ ತುರ್ತು ಸಹಾಯ ಸಂಖ್ಯೆಗೆ ಕರೆ ಮಾಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಸಾರ್ವಜನಿಕರ ಸಹಕಾರದಿಂದ ಯುವಕನನ್ನು ರಕ್ಷಿಸಲಾಗಿದೆ. ಆರೋಪಿಗಳನ್ನು ಸ್ಥಳದಲ್ಲಿಯೇ ಬಂಧಿಸಿ, ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 1
Angry Angry 0
Sad Sad 1
Wow Wow 0