ಚಿತ್ರದುರ್ಗದಲ್ಲಿ ಭೀಕರ ಅಪಘಾತ: ಬೆಂಕಿಗಾಹುತಿಯಾದ ಬಸ್‌, ಪವಾಡಸದೃಶವಾಗಿ ಪಕ್ಕದ ಬಸ್‌ ನ 42 ಮಕ್ಕಳು ಸುರಕ್ಷಿತ!

Dec 25, 2025 - 16:49
 0  717
ಚಿತ್ರದುರ್ಗದಲ್ಲಿ ಭೀಕರ ಅಪಘಾತ: ಬೆಂಕಿಗಾಹುತಿಯಾದ ಬಸ್‌, ಪವಾಡಸದೃಶವಾಗಿ ಪಕ್ಕದ ಬಸ್‌ ನ 42 ಮಕ್ಕಳು ಸುರಕ್ಷಿತ!
Photo credit: Etv bharath

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ಗುರುವಾರ ನಸುಕಿನ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ, ಪವಾಡಸದೃಶ ರೀತಿಯಲ್ಲಿ ಮತ್ತೊಂದು ಬಸ್‌ ನಲ್ಲಿದ್ದ 42 ಶಾಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ಗೆ ಎದುರುಗಡೆಯಿಂದ ಬಂದ ಕಂಟೇನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಸ್‌ಗೆ ಬೆಂಕಿ ಹೊತ್ತಿಕೊಂಡು, ಎಂಟು ಪ್ರಯಾಣಿಕರು ಹಾಗೂ ಲಾರಿ ಚಾಲಕ ಸೇರಿ ಒಟ್ಟು ಒಂಬತ್ತು ಮಂದಿ ಸಜೀವ ದಹನಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಅಪಘಾತ ಸಂಭವಿಸಿದ ಕ್ಷಣದಲ್ಲಿ ಇದೇ ಬಸ್‌ಗೆ ಸರಿಸಮವಾಗಿ ಸಾಗುತ್ತಿದ್ದ ಬೆಂಗಳೂರಿನ ಟಿ. ದಾಸರಹಳ್ಳಿಯ ಖಾಸಗಿ ಶಾಲೆಯ ಮಕ್ಕಳ ಬಸ್‌ಗೆ ಖಾಸಗಿ ಬಸ್ ತಾಕಿದೆ. ಡಿಕ್ಕಿಯ ರಭಸಕ್ಕೆ ಮಕ್ಕಳಿದ್ದ ಬಸ್ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಮುಂದೆ ಚರಂಡಿಗೆ ಜಾರಿಕೊಂಡು ನಿಂತಿದೆ. ಪರಿಣಾಮ ದೊಡ್ಡ ದುರಂತ ತಪ್ಪಿದ್ದು, ಬಸ್‌ನಲ್ಲಿದ್ದ ಎಲ್ಲ 42 ಮಕ್ಕಳು ಸುರಕ್ಷಿತವಾಗಿ ಪಾರಾಗಿದ್ದಾರೆ.

ಪೂರ್ವ ವಲಯ ಐಜಿಪಿ ರವಿಕಾಂತೇಗೌಡ ಮಾತನಾಡಿ, ಡಿವೈಡರ್ ದಾಟಿ ಬಂದ ಕಂಟೇನರ್ ಲಾರಿ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಿಂದ ಬಸ್‌ನ ಡೀಸೆಲ್ ಟ್ಯಾಂಕ್‌ಗೆ ಹಾನಿಯಾಗಿದ್ದು, ಡೀಸೆಲ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಖಾಸಗಿ ಬಸ್ ಶಾಲಾ ಮಕ್ಕಳ ಬಸ್‌ಗೆ ತಾಕಿದರೂ, ಪವಾಡಸದೃಶವಾಗಿ ಮಕ್ಕಳು ಪಾರಾಗಿದ್ದಾರೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಬಿ.ಟಿ. ಮಾಹಿತಿ ನೀಡಿದ್ದು, ಗಾಯಗೊಂಡವರನ್ನು ಹಿರಿಯೂರು ಹಾಗೂ ತುಮಕೂರು ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಲಾರಿ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 1
Sad Sad 1
Wow Wow 2