ಪತ್ನಿ ಹತ್ಯೆ ಮಾಡಿ ಪತಿ ಆತ್ಮಹತ್ಯೆ: ದಾಂಪತ್ಯ ಕಲಹಕ್ಕೆ ಏಳು ವರ್ಷದ ಮಗು ತಬ್ಬಲಿ

Dec 16, 2025 - 12:19
 0  1.5k
ಪತ್ನಿ ಹತ್ಯೆ ಮಾಡಿ ಪತಿ ಆತ್ಮಹತ್ಯೆ: ದಾಂಪತ್ಯ ಕಲಹಕ್ಕೆ ಏಳು ವರ್ಷದ ಮಗು ತಬ್ಬಲಿ

ರಾಮನಗರ: ಕೌಟುಂಬಿಕ ಕಲಹ ತೀವ್ರಗೊಂಡ ಹಿನ್ನೆಲೆಯಲ್ಲಿ ಪತ್ನಿಯನ್ನು ಹತ್ಯೆ ಮಾಡಿ, ಬಳಿಕ ಪತಿ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲ್ಲೂಕಿನ ಹಾಗಲಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಈ ಘಟನೆಯಲ್ಲಿ ಏಳು ವರ್ಷದ ಹೆಣ್ಣುಮಗು ತಂದೆ–ತಾಯಿಯನ್ನು ಕಳೆದುಕೊಂಡು ಅನಾಥವಾಗಿದೆ.

ಮೃತರನ್ನು ನವೀನ್ ಕುಮಾರ್ (35) ಹಾಗೂ ವತ್ಸಲ (30) ಎಂದು ಗುರುತಿಸಲಾಗಿದೆ. ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದ ಈ ದಂಪತಿಗೆ ಏಳು ವರ್ಷದ ಮಗಳು ಇದ್ದಳು. ದಂಪತಿಯ ನಡುವೆ ಸಣ್ಣಪುಟ್ಟ ವಿಚಾರಗಳಿಗೆ ಆಗಾಗ ಜಗಳ ನಡೆಯುತ್ತಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಕಲಹದ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು ಎನ್ನಲಾಗಿದೆ.

ಸೋಮವಾರ ಮತ್ತೊಮ್ಮೆ ಜಗಳ ತೀವ್ರಗೊಂಡು, ನವೀನ್ ಪತ್ನಿ ವತ್ಸಲಳನ್ನು ಕತ್ತುಹಿಸುಕಿ ಹತ್ಯೆ ಮಾಡಿದ ಬಳಿಕ ಮನೆಯೊಳಗಿನ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬೆಳಕಿಗೆ ಬಂದಾಗ ಪತ್ನಿಯ ಮೃತದೇಹ ಮಂಚದ ಮೇಲೆ ಇದ್ದು, ಪತಿಯ ಮೃತದೇಹ ಅದೇ ಮೇಲ್ಭಾಗದಲ್ಲಿ ನೇತಾಡುತ್ತಿರುವ ಸ್ಥಿತಿಯಲ್ಲಿ ಕಂಡುಬಂದಿದೆ.  

ವಿಷಯ ತಿಳಿಯುತ್ತಿದ್ದಂತೆಯೇ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ತಿಳಿದುಬಂದಿದೆ.

What's Your Reaction?

Like Like 0
Dislike Dislike 1
Love Love 2
Funny Funny 1
Angry Angry 1
Sad Sad 4
Wow Wow 0