ಪ್ರೀತಿಸಿ ಮದುವೆಯಾದ ಹೆಂಡತಿಯನ್ನು ಕೊಂದ ಗಂಡ ಜೈಲುಪಾಲು; ಇಬ್ಬರು ಮಕ್ಕಳು ಅನಾಥ

Nov 29, 2025 - 23:29
 0  1.3k
ಪ್ರೀತಿಸಿ ಮದುವೆಯಾದ ಹೆಂಡತಿಯನ್ನು ಕೊಂದ ಗಂಡ ಜೈಲುಪಾಲು; ಇಬ್ಬರು ಮಕ್ಕಳು ಅನಾಥ
Photo credit:Public tv

ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾದ ದಾಂಪತ್ಯದ ಜೀವನ ದಾರುಣ ಅಂತ್ಯ ಕಂಡಿರುವ ಘಟನೆ ಚೇಳೂರು ತಾಲೂಕಿನ ಗೆರಿಗೆರೆಡ್ಡಿಪಾಳ್ಯ (ಪಾತೂರು) ಗ್ರಾಮದಲ್ಲಿ ನಡೆದಿದೆ.

 ಹೆಂಡತಿಯ ಮೇಲೆ ಅನುಮಾನ ಪಟ್ಟ ಗಂಡ, ಮನೆಯಲ್ಲಿ ಗಲಾಟೆಯಲ್ಲಿ ಆಕೆಯನ್ನು ರಾಡ್‌ನಿಂದ ಹೊಡೆದು ಕೊಂದ ಪ್ರಕರಣ ಹೊರಬಿದ್ದಿದೆ. ಈ ಘಟನೆಯಿಂದ ದಂಪತಿಯ ಇಬ್ಬರು ಮುದ್ದಾದ ಹೆಣ್ಣುಮಕ್ಕಳು ತಾಯಿ-ತಂದೆ ಇಬ್ಬರನ್ನೂ ಒಂದೇ ದಿನ ಕಳೆದುಕೊಂಡು ಅನಾಥರಾಗಿದ್ದಾರೆ.

ಗ್ರಾಮದ ಡ್ರೈವರ್ ಬಾಲು ಹಾಗೂ ಬೇರೆ ಧರ್ಮದ ದಿಲ್ಷಾತ್ ನಾಲ್ಕು ವರ್ಷಗಳ ಹಿಂದೆ ಪೋಷಕರ ವಿರೋಧಗಳ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯ ನಂತರ ದಿಲ್ಷಾತ್ ತನ್ನ ಹೆಸರನ್ನು ‘ಕವಿತಾ’ ಎಂದು ಬದಲಿಸಿಕೊಂಡಿದ್ದರು. ದಂಪತಿಯ ಪ್ರಾರಂಭಿಕ ಜೀವನ ಸುಖಕರವಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಬಾಲುಗೆ ಹೆಂಡತಿ ಫೋನ್‌ನಲ್ಲಿ ಹೆಚ್ಚಿನ ಸಂಭಾಷಣೆ ನಡೆಸುತ್ತಿರುವುದು, ಬೇರೆ ಯಾರೊಂದಿಗೋ ಹೆಚ್ಚು ಸಲುಗೆಯಿಂದ ವರ್ತಿಸುತ್ತಿರುವುದನ್ನು ಅನುಮಾನಿಸಿ ಮನೆಯಲ್ಲಿ ಪದೇಪದೇ ಜಗಳವಾಡುತ್ತಿದ್ದ ಎಂದು ತಿಳಿದು ಬಂದಿದೆ.

ಶನಿವಾರ ಕೆಲಸ ಮುಗಿಸಿ ಮನೆಗೆ ಬಂದ ಬಾಲು, ಇದೇ ವಿಚಾರವಾಗಿ ಜಗಳ ಶುರುಮಾಡಿದ್ದ. ವಾಗ್ವಾದ ತೀವ್ರಗೊಂಡಾಗ ಅವನು ಮನೆಯಲ್ಲಿದ್ದ ಕಬ್ಬಿಣದ ರಾಡ್‌ ನಿಂದ ಕವಿತಾಳ ತಲೆಗೆ ಬಲವಾಗಿ ಹೊಡೆದಿದ್ದಾನೆ. ರಕ್ತಸ್ರಾವ ಹೆಚ್ಚಾಗಿ ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಆಕೆಯನ್ನು ಉಳಿಸಲು ಸಾಧ್ಯವಾಗಿಲ್ಲ.

ಘಟನೆ ಕುರಿತು ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಾಲು ಬಂಧನಕ್ಕೊಳಗಾಗಿದ್ದಾನೆ. ತಂದೆ ಜೈಲುಪಾಲಾದ ಹಿನ್ನೆಲೆ ಎರಡು ಮಕ್ಕಳು ತಬ್ಬಲಿಯಾಗಿದ್ದಾರೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0