ಮಹಿಳೆಯರು ಜಾಗೃತರಾದರೆ ಸ್ವಸ್ಥ ಮತ್ತು ಸದೃಢ ಸಮಾಜ ನಿರ್ಮಾಣ ಸಾಧ್ಯ -ಜಿ.ವಿ. ಶ್ರೀನಾಥ್

Dec 22, 2025 - 10:07
 0  95
ಮಹಿಳೆಯರು ಜಾಗೃತರಾದರೆ ಸ್ವಸ್ಥ ಮತ್ತು ಸದೃಢ ಸಮಾಜ ನಿರ್ಮಾಣ ಸಾಧ್ಯ -ಜಿ.ವಿ. ಶ್ರೀನಾಥ್

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ಮಹಿಳೆಯರು ಸುಶಿಕ್ಷಿತರಾಗುವ ಮೂಲಕ ಜಾಗೃತರಾದರೆ ಸ್ವಸ್ಥ ಮತ್ತು ಸದೃಢ ಸಮಾಜ ನಿರ್ಮಾಣ ಸಾದ್ಯವೆಂದು ಮಡಿಕೇರಿ ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಜಿ.ವಿ.ಶ್ರೀನಾಥ್ ಅಭಿಪ್ರಾಯಪಟ್ಟರು.

ಮಕ್ಕಂದೂರು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಸಂಜೀವಿನಿ ಒಕ್ಕೂಟದ ಸ್ತ್ರೀ ಶಕ್ತಿ ಸಂಘಗಳು ಆಯೋಜಿಸಿದ ಲಿಂಗತ್ವ ಆಧಾರಿತ ದೌರ್ಜನ್ಯ ವಿರುದ್ದ ರಾಷ್ಟ್ರೀಯ ಅಭಿಯಾನದಡಿಯಲ್ಲಿ ಮಹಿಳೆಯರಿಗೆ ರಕ್ಷಣೆ ಕುರಿತು ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕೇವಲ ನಾಲ್ಕು ಗೋಡೆಗೆ ಸೀಮಿತವಾಗಿದ್ದ ಮಹಿಳೆ ಈಗ ಅಂತರಾಷ್ಟ್ರೀಯ ಮಟ್ಟದವರೆಗೂ ಸಾಧನೆ ಮಾಡುತ್ತಿರುವುದಕ್ಕೆ ಸಂಘಟನೆ ಮತ್ತು ಶೈಕ್ಷಣಿಕ ಬೆಳವಣಿಗೆ ಕಾರಣವಾಗಿದೆ.ಪ್ರತಿ ಹೆಣ್ಣು ಮಕ್ಕಳಿಗೆ ಶಿಕ್ಷಣ, ಸಾಮಾಜಿಕ ವ್ಯವಸ್ಥೆ, ದೈಹಿಕ, ಭಾವನಾತ್ಮಕ ಸಂಬಂಧಗಳ ಕುರಿತು ಮನೆಯಲ್ಲಿಯೇ ಶಿಕ್ಷಣ ನೀಡಬೇಕಾಗಿದೆ ಎಂದರು. 

ಹೆಣ್ಣೊಂದು ಕಲಿತರೆ ಶಾಲೆಯೊಂದನ್ನು ತೆರೆದಂತೆ ಎಂಬಂತೆ ಬಾಲ್ಯದಿಂದಲೇ ಶಿಕ್ಷಣ ಮತ್ತು ತಿಳುವಳಿಕೆ ನೀಡುವ ಜವಬ್ದಾರಿ ಎಲ್ಲಾ ತಾಯಂದಿರ ಮೇಲಿದೆ ಎಂದರು.

 

ಮಹಿಳಾ ದೌರ್ಜನ್ಯ, ರಕ್ಷಣೆ, ಕಾನೂನು, ಕಾಯಿದೆಗಳ ನಡುವೆ ಸಂಘಟನಾತ್ಮಕವಾಗಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಬೆಳವಣಿಗೆಗಳೊಂದಿಗೆ ಪ್ರಗತಿ ಸಾಧಿಸಲು ಸಾದ್ಯವೆಂದ ಅವರು ಸುರಕ್ಷಿತ ಆರೋಗ್ಯ ಕಾಪಾಡುವುದು ಮುಖ್ಯವಾಗಿದೆ ಎಂದರು. ಇಂದು ಒತ್ತಡದ ಬದುಕಿನಲ್ಲಿ ಮಾನಸಿಕ ಸ್ಥಿರ ಇಲ್ಲದೇ ಹಲವಾರು ಕಾಯಿಲೆಗಳನ್ನು ನಾವೇ ಆಹ್ವಾನಿಸುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

ಜೀವನ ಶೈಲಿ ಮತ್ತು ಆಹಾರ ಪದ್ದತಿ ಬದಲಾವಣೆಯೊಂದಿಗೆ ಉತ್ತಮ ಆರೋಗ್ಯ ಕಾಪಾಡುವುದು ಮುಖ್ಯವಾಗಿದೆ ಎಂದು ತಿಳಿಸಿದರು.

ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಟಿ.ಎನ್ ಪಾಲಾಕ್ಷ ರವರು ಆರೋಗ್ಯದ ಕುರಿತು ಸಮಗ್ರ ಮಾಹಿತಿ ನೀಡಿ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ಹಾಗೂ ಸಾಂಕ್ರಾಮಿಕ, ಆಸಾಂಕ್ರಾಮಿಕ ರೋಗಿಗಳ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಿದರು

  ಗ್ರಾಮ ಪಂಚಾಯತಿ ಅದ್ಯಕ್ಷರಾದ ರಮೇಶ್ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳೆಯರ ಬೆಳವಣಿಗೆಗೆ ಸದಾ ಸಹಕಾರ ನೀಡುವುದಾಗಿ ತಿಳಿಸಿದರು. 

ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ವಿಮಲ ಬಿ.ಎಸ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ದೇವಿಕ,ಒಕ್ಕೂಟದ ಅದ್ಯಕ್ಷರಾದ ಜಲಬಿ, ಪದಾಧಿಕಾರಿಗಳಾದ ಅನಿತಾ,ಗೀತಾ,ನೇತ್ರಾವತಿ, ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಪುನಿತ ಮತ್ತು ಮಂಜುನಾಥ್, ಆರಕ್ಷಕರಾದ ರಾಯ್ ಸೇರಿದಂತೆ ಸಂಘದ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0