ಅಕ್ರಮ ಬಂಧನ ಪ್ರಕರಣ | ಯುವಕನಿಗೆ ₹2 ಲಕ್ಷ ಪರಿಹಾರ ನೀಡುವಂತೆ ಆದೇಶ ನೀಡಿದ ಬಾಂಬೆ ಹೈಕೋರ್ಟ್ : ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ವೇತನದಿಂದಲೇ ಪರಿಹಾರ ನೀಡಲು ಆದೇಶ
ಮುಂಬೈ: ಜಲಗಾಂವ್ ಜಿಲ್ಲಾ ನ್ಯಾಯಾಲಯವು 20 ವರ್ಷದ ಯುವಕನ ಬಂಧನಕ್ಕೆ ನೀಡಿದ್ದ ಆದೇಶವನ್ನು ಬಾಂಬೆ ಹೈಕೋರ್ಟ್ನ ಔರಂಗಾಬಾದ್ ಪೀಠವು ರದ್ದುಗೊಳಿಸಿದ್ದು, ಸರ್ಕಾರವು ಆತನಿಗೆ ₹2 ಲಕ್ಷ ಪರಿಹಾರ ನೀಡುವಂತೆ ನಿರ್ದೇಶಿಸಿದೆ.
ಅದೇ ವೇಳೆ, ಬಂಧನ ಆದೇಶ ಹೊರಡಿಸಿದ್ದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ವೇತನದಿಂದಲೇ ಪರಿಹಾರ ಮೊತ್ತವನ್ನು ವಸೂಲಿ ಮಾಡುವಂತೆ ಹೈಕೋರ್ಟ್ ಸೂಚಿಸಿದೆ.
ದೀಕ್ಷಾಂತ ಸತ್ಕಾಲೆ ಎಂಬ ಯುವಕ ತಮ್ಮ ಬಂಧನದ ವಿರುದ್ಧ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ವಿಭಾ ಕಂಕಣವಾಡಿ ಮತ್ತು ಹಿತೇನ್ ವೆನೆಗಾಲ್ಕರ್ ಅವರ ಪೀಠವು ಈ ಅರ್ಜಿಯನ್ನು ವಿಚಾರಣೆಗೈದಿತು.
ಅರ್ಜಿದಾರರು ತಮ್ಮ ಮನವಿಯಲ್ಲಿ, “ಜುಲೈ 2023ರಲ್ಲಿ ಜಿಲ್ಲಾ ನ್ಯಾಯಾಲಯ ನನ್ನ ಬಂಧನಕ್ಕೆ ಆದೇಶ ನೀಡಿತ್ತು. ಆದರೆ ಆ ಆದೇಶವನ್ನು ಆಗ ಜಾರಿಗೊಳಿಸಲಿಲ್ಲ. ಮೇ 2024ರಲ್ಲಿ ಮತ್ತೊಂದು ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಯಾದ ಬಳಿಕ, ಆ ಹಳೆಯ ಆದೇಶದ ಆಧಾರದ ಮೇಲೆ ಮತ್ತೆ ಬಂಧಿಸಲಾಯಿತು,” ಎಂದು ತಿಳಿಸಿದ್ದಾರೆ.
ವಿಚಾರಣೆ ಬಳಿಕ ಅಕ್ಟೋಬರ್ 1ರಂದು ತೀರ್ಪು ನೀಡಿದ ಹೈಕೋರ್ಟ್ ಪೀಠವು, “ಬಂಧನ ಆದೇಶವನ್ನು ಹಲವು ತಿಂಗಳು ಜಾರಿಗೊಳಿಸದೆ ಬಾಕಿಯಿಟ್ಟು, ನಂತರ ವ್ಯಕ್ತಿಯನ್ನು ಮತ್ತೆ ಬಂಧಿಸಿರುವುದು ಕಾನೂನುಬಾಹಿರ ಕ್ರಮವಾಗಿದೆ. ಇದು ಬದುಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದಂತಹ ಸಂವಿಧಾನಾತ್ಮಕ ಹಕ್ಕುಗಳ ಸ್ಪಷ್ಟ ಉಲ್ಲಂಘನೆ,” ಎಂದು ಅಭಿಪ್ರಾಯಪಟ್ಟಿದೆ.