ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಚೊಚ್ಚಲ ವಿಶ್ವಕಪ್ ಕಿರೀಟ : ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಗೆಲುವು
ಮುಂಬೈ: ನವಿ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ರೋಚಕ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾವನ್ನು ಮಣಿಸಿ ಇತಿಹಾಸ ನಿರ್ಮಿಸಿದೆ. ಈ ಜಯದೊಂದಿಗೆ ಭಾರತ ತಂಡವು ತನ್ನ ಮೊದಲ ಮಹಿಳಾ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡ ದಕ್ಷಿಣ ಆಫ್ರಿಕಾ ತಂಡವು ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಶ್ರೇಷ್ಠ ಆಟದ ಬಲದಿಂದ ಭಾರತವು ನಿಗದಿತ 50 ಓವರ್‌ಗಳಲ್ಲಿ 298 ರನ್‌ಗಳ ಭರ್ಜರಿ ಮೊತ್ತ ಕಟ್ಟಿತು.
ಪ್ರತಿಯಾಗಿ 299 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು ನಿಧಾನಗತಿಯ ಆರಂಭ ಪಡೆದಿತು. ನಾಯಕಿ ಲಾರಾ ವೋಲ್ವಾರ್ಡ್ ತಾಳ್ಮೆಯ ಇನಿಂಗ್ಸ್ ಮೂಲಕ ತಂಡವನ್ನು ಮುನ್ನಡೆಸುತ್ತಾ ಭಾರತದ ಅಭಿಮಾನಿಗಳಲ್ಲಿ ಕ್ಷಣಕ್ಷಣಕ್ಕೂ ಆತಂಕ ಹುಟ್ಟಿಸಿದರು. ಅವರು 98 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 101 ರನ್‌ಗಳ ಶತಕ ದಾಖಲಿಸಿದರು.
ಆದರೆ, ದೀಪ್ತಿ ಶರ್ಮಾ ಅವರ ಚುರುಕಾದ ಎಸೆತಕ್ಕೆ ಅಮನ್‌ಜೋತ್ ಕೌರ್ ಅವರ ಕೈಗಳಲ್ಲಿ ವೋಲ್ವಾರ್ಡ್ ಔಟಾದ ಕ್ಷಣದಲ್ಲೇ ಕ್ರೀಡಾಂಗಣವು ಸಂಭ್ರಮದ ಮಹಾಸಾಗರವಾಗಿ ಮಾರ್ಪಟ್ಟಿತು. ಆ ಬಳಿಕ ಭಾರತೀಯ ಬೌಲರ್‌ಗಳ ನಿಯಂತ್ರಿತ ಬೌಲಿಂಗ್ ಎದುರಿಸಲು ವಿಫಲವಾದ ದಕ್ಷಿಣ ಆಫ್ರಿಕಾ 45.3 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲಿನ ದಾರಿ ಹಿಡಿಯಿತು.
ಈ ಗೆಲುವಿನಿಂದ ಭಾರತದ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭಗೊಂಡಿದ್ದು, ಕ್ರೀಡಾಭಿಮಾನಿಗಳು ದೇಶದ ಮೂಲೆಮೂಲೆಗಳಲ್ಲಿ ಸಂಭ್ರಮಿಸಿದರು.