ಇಂಗ್ಲೆಂಡಿನಲ್ಲಿ ಉದ್ಯೋಗ ಆಮಿಷ: ಕರಾವಳಿಯ ನೂರಾರು ಮಂದಿಗೆ ಕೋಟ್ಯಂತರ ರೂ. ವಂಚನೆ; ಬೆಂಗಳೂರಿನ ದಂಪತಿ ಬಂಧನ

Oct 30, 2025 - 09:55
 0  742
ಇಂಗ್ಲೆಂಡಿನಲ್ಲಿ ಉದ್ಯೋಗ ಆಮಿಷ: ಕರಾವಳಿಯ ನೂರಾರು ಮಂದಿಗೆ ಕೋಟ್ಯಂತರ ರೂ. ವಂಚನೆ; ಬೆಂಗಳೂರಿನ ದಂಪತಿ ಬಂಧನ

ಮಂಗಳೂರು: ಇಂಗ್ಲೆಂಡ್‌ನಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ನೂರಾರು ಕ್ರೈಸ್ತ ಸಮುದಾಯದ ಯುವಕರಿಂದ ಲಕ್ಷಾಂತರ ರೂಪಾಯಿ ವಂಚಿಸಿದ ದಂಪತಿಯನ್ನು ಕಾವೂರು ಪೊಲೀಸರು ಬಲೆಬೀಸಿ ಬಂಧಿಸಿದ್ದಾರೆ.

ಬಂಧಿತರನ್ನು ಬೆಂಗಳೂರು ಆನೇಕಲ್ ತಾಲೂಕಿನ ವೀವರ್ಸ್ ಕಾಲೊನಿ ನಿವಾಸಿ ಪ್ರಕೃತಿ ಯು. (34) ಹಾಗೂ ಕುಂದಾಪುರ ತಾಲೂಕಿನ ಗಂಗೊಳ್ಳಿ ಚರ್ಚ್ ರೋಡ್ ಮೂಲದ ಆಲ್ಬನ್ ರೆಬೇರೊ (42) ಎಂದು ಗುರುತಿಸಲಾಗಿದೆ. ಇಬ್ಬರೂ ಪ್ರೀತಿಸಿ ಮದುವೆಯಾದ ಬಳಿಕ ಆನೇಕಲ್‌ನಲ್ಲೇ ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇವರು ಆನ್‌ಲೈನ್‌ ಮೂಲಕ ಹಾಗೂ ಪರಿಚಿತರ ಸಹಾಯದಿಂದ “ಇಂಗ್ಲೆಂಡ್ ಹಾಗೂ ಇತರ ಯುರೋಪಿಯನ್ ರಾಷ್ಟ್ರಗಳಲ್ಲಿ ಉತ್ತಮ ಸಂಬಳದ ಕೆಲಸ ಸಿಗುತ್ತದೆ” ಎಂಬ ಆಮಿಷ ತೋರಿಸಿ ಪ್ರತಿ ವ್ಯಕ್ತಿಯಿಂದ 3 ರಿಂದ 4 ಲಕ್ಷ ರೂ. ವಸೂಲಿ ಮಾಡಿದ್ದರು. ಹೀಗೆ ನೂರಾರು ಮಂದಿಯಿಂದ ಕೋಟ್ಯಂತರ ರೂಪಾಯಿ ಹಣ ವಸೂಲಿ ಮಾಡಿಕೊಂಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಈ ಸಂಬಂಧ 30ಕ್ಕೂ ಹೆಚ್ಚು ಮಂದಿ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ಮುಂದುವರಿದಿದೆ. ವಂಚನೆಗೆ ಒಳಗಾದವರಲ್ಲಿ ಹೆಚ್ಚಿನವರು ಕ್ರಿಶ್ಚಿಯನ್ ಸಮುದಾಯದವರು. ವಿದೇಶ ಉದ್ಯೋಗದ ಆಸೆಯಲ್ಲಿದ್ದ ಇವರು ಹಣ ಪಾವತಿಸಿದ ನಂತರ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ ಎಂದು ತಿಳಿದು ಬಂದಿದೆ.

ದಂಪತಿ ಬೆಂಗಳೂರಿನ ಆನೇಕಲ್‌ನಲ್ಲಿ “ಪಬ್ಲಿಕ್ ಸ್ಕೂಲ್” ಎಂಬ ಹೆಸರಿನಲ್ಲಿ ಶಾಲೆ ನಡೆಸುತ್ತಿದ್ದರು. ಅವರ ನಿವಾಸದಲ್ಲಿ ಪೊಲೀಸರು ನಡೆಸಿದ ದಾಳಿಯಲ್ಲಿ 24 ಪಾಸ್‌ಪೋರ್ಟ್‌ಗಳು ಹಾಗೂ ₹4.30 ಲಕ್ಷ ಮೌಲ್ಯದ 43 ಗ್ರಾಂ ಬಂಗಾರ ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ.

ಬಂಧಿತರನ್ನು ಬೆಂಗಳೂರಿನಿಂದ ಮಂಗಳೂರಿಗೆ ಕರೆತರಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0