ಜಮಖಂಡಿಯಲ್ಲಿ ಪತ್ರಕರ್ತನಿಗೆ ಹಿಟ್ ಅಂಡ್ ರನ್ ಅಪಘಾತ ಪ್ರಕರಣ | ತನಿಖೆಯ ವೇಳೆ ಕೊಲೆ ಪ್ರಕರಣವೆಂದು ಬಯಲು; ಮೂವರ ಬಂಧನ | ಪಡಿತರ ಅಕ್ಕಿ ದಂಧೆಯೇ ಕೊಲೆಗೆ ಕಾರಣ!

Oct 11, 2025 - 08:49
 0  654
ಜಮಖಂಡಿಯಲ್ಲಿ ಪತ್ರಕರ್ತನಿಗೆ ಹಿಟ್ ಅಂಡ್ ರನ್ ಅಪಘಾತ ಪ್ರಕರಣ | ತನಿಖೆಯ ವೇಳೆ ಕೊಲೆ ಪ್ರಕರಣವೆಂದು ಬಯಲು; ಮೂವರ ಬಂಧನ  | ಪಡಿತರ ಅಕ್ಕಿ ದಂಧೆಯೇ ಕೊಲೆಗೆ ಕಾರಣ!

ಜಮಖಂಡಿ: ಬಾಗಲಕೋಟೆಯ ಜಿಲ್ಲೆಯ ಜಮಖಂಡಿಯಲ್ಲಿ ಹಿಟ್ ಅಂಡ್ ರನ್ ರಸ್ತೆ ಅಪಘಾತವೆಂದು ದಾಖಲಾದ ಪ್ರಕರಣವನ್ನು ಬೇಧಿಸಿದ ಪೊಲೀಸರು, ಅದು ಪೂರ್ವನಿಯೋಜಿತ ಕೊಲೆ ಎಂದು ಬಹಿರಂಗಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅಕ್ಟೋಬರ್ 8ರಂದು ಗ್ರಾಮೀಣ ಠಾಣೆ ವ್ಯಾಪ್ತಿಯ ಬಂಡಿಗಣಿ ಕ್ರಾಸ್ ಬಳಿ ಪತ್ರಕರ್ತ ಬಸವರಾಜ ಕಾನಕೊಂಡ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪಿಕಪ್ ವಾಹನ ಡಿಕ್ಕಿ ಹೊಡೆದು ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಆರಂಭದಲ್ಲಿ ಹಿಟ್ ಆಂಡ್ ರನ್ ಪ್ರಕರಣವೆಂದು ದಾಖಲಿಸಲಾಗಿದ್ದ ಈ ಪ್ರಕರಣ, ತನಿಖೆಯ ಪ್ರಗತಿಯಲ್ಲಿ ಹೊಸ ತಿರುವು ಪಡೆದು ಕೊಲೆ ಪ್ರಕರಣ ಎಂದು ಬಯಲಾಗಿದೆ.

ಅಶ್ಫಾಕ್ ಸುಲೇಮಾನ್ ಮುಲ್ಲಾ, ನಂದೀಶ್ವರ ಮಹಾದೇವ ಪವಾಡಿ ಹಾಗೂ ಮಹೇಶ ಶಿಶೈಲ ಪವಾಡಿ ಬಂಧಿತರಾಗಿದ್ದು, ವಿಚಾರಣೆಯ ವೇಳೆ ಅಶ್ಫಾಕ್ ಮುಲ್ಲಾ, ಪೂರ್ವಯೋಜನೆಯಂತೆ ಬಸವರಾಜ ರಿಗೆ ಡಿಕ್ಕಿ ಹೊಡೆದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದರು. ಈ ಅಕ್ರಮದ ಕುರಿತು ಬಸವರಾಜ ಕಾನಕೊಂಡ ನಿರಂತರವಾಗಿ ಬ್ಲಾಕ್‌ ಮೇಲ್ ಮಾಡುತ್ತಾ ಹಣಕ್ಕೆ ಬೇಡಿಕೆ ಇಡುತ್ತಿದ್ದನೆಂದು ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದಲೂ ಈ ಬ್ಲಾಕ್‌ಮೇಲ್ ನಡೆಯುತ್ತಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ.

ಪತ್ರಕರ್ತ ಬಸವರಾಜರನ್ನು ಮೊದಲಿಗೆ ತೇರದಾಳದ ಹೊಟೇಲ್‌ಗೆ ಕರೆಸಿ ಚರ್ಚೆ ನಡೆಸಲಾಯಿತು. ನಂತರ ಅವರು ತಮ್ಮ ಸ್ಕೂಟಿಯಲ್ಲಿ ಜಮಖಂಡಿಯತ್ತ ಹೊರಟಿದ್ದಾಗ, ಆರೋಪಿಗಳು ಹಿಂಬಾಲಿಸಿದರು. ಬಂಡಿಗಣಿ ಕ್ರಾಸ್ ಹತ್ತಿರ ಅಶ್ಫಾಕ್ ಮುಲ್ಲಾ ಪಿಕಪ್ ವಾಹನದೊಂದಿಗೆ ಕಾಯುತ್ತಿದ್ದು, ಸಹಚರರಿಂದ ನಿರಂತರ ಮಾಹಿತಿ ಪಡೆಯುತ್ತಿದ್ದ ಎನ್ನಲಾಗಿದೆ.

 ಪೂರ್ವನಿಯೋಜನೆಯಂತೆ ರಾಂಗ್ ರೂಟ್‌ನಲ್ಲಿ ವೇಗವಾಗಿ ಬಂದು ಬಸವರಾಜನಿಗೆ ಡಿಕ್ಕಿ ಹೊಡೆದು ಹಿಟ್ ಆಂಡ್ ರನ್ ಅಪಘಾತದಂತೆ ತೋರಿಸಲಾಯಿತು. ಬಳಿಕ ಯುಸುಫುಲ್ಲಾ ಎಂಬವನ ಸಹಾಯದಿಂದ ವಾಹನವನ್ನು ಅಡಗಿಸಲಾಗಿತ್ತು.

 ಸಿಸಿಟಿವಿ ದೃಶ್ಯಗಳು, ಡಿಜಿಟಲ್ ಪುರಾವೆಗಳು, ಸಾಕ್ಷಿಗಳ ಹೇಳಿಕೆಗಳು ಮತ್ತು ವಿಧಿವಿಜ್ಞಾನ ಸುಳಿವುಗಳು ತನಿಖೆಗೆ ಬಲ ನೀಡಿದ್ದು, ಅಪಘಾತ ಪ್ರಕರಣವು ತನಿಖೆಯ ವೇಳೆ ಕೊಲೆ ಪ್ರಕರಣ ಎಂದು ಬಯಲಾಗಿದೆ.

ಅಪರಾಧದಲ್ಲಿ ಬಳಸಲಾದ ಪಿಕಪ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 2
Sad Sad 1
Wow Wow 0