ಕೆಎಂಎ ವತಿಯಿಂದ ಡಾ. ಮಂತರ್ ಗೌಡರಿಗೆ ಸನ್ಮಾನ

Jan 14, 2026 - 22:26
 0  407
ಕೆಎಂಎ ವತಿಯಿಂದ ಡಾ. ಮಂತರ್ ಗೌಡರಿಗೆ ಸನ್ಮಾನ

ಮಡಿಕೇರಿ: ಕೊಡಗಿನ ಜಮ್ಮಾ ಹಿಡುವಳಿದಾರರನ್ನು ದಶಕಗಳದಿಂದ ಕಾಡುತ್ತಿದ್ದ ಜಮ್ಮಾ ಬಾಣೆ ಭೂಮಿಗೆ ಸಂಬಂಧಿಸಿದ ತಿದ್ದುಪಡಿ ವಿಧೇಯಕವನ್ನು ಕಳೆದ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರನ್ನು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಲಾಯಿತು.

 ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ನ  ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿಯವರ ನೇತೃತ್ವದ ನಿಯೋಗ ಮಂಗಳವಾರದಂದು ಶಾಸಕರ ಸೋಮವಾರಪೇಟೆಯ ನಿವಾಸದಲ್ಲಿ ಭೇಟಿ ಮಾಡಿ ಅವರಿಗೆ ಶಾಲು ಹೊದಿಸಿ ಪುಷ್ಪಮಾಲೆ ಅರ್ಪಿಸಿ ಆತ್ಮೀಯವಾಗಿ ಸನ್ಮಾನಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೆಎಂಎ ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ, ಕೊಡಗಿನ ಜಮ್ಮಾ-ಬಾಣೆ ಶಾಸನಸಭೆಯಲ್ಲಿ ಅಂಗೀಕಾರಗೊಂಡ ಕರ್ನಾಟಕ ಭೂಕಂದಾಯ 2ನೇ ತಿದ್ದುಪಡಿ ವಿಧೇಯಕ-2025 ಹಿಡುವಳಿದಾರರ ಪರವಾಗಿರಬೇಕು. ಮುಂದೆ ಬೇರೆ ಬೇರೆ ಕಾನೂನುಗಳ ನೆಪಗಳಿಂದ ಹಿಡುವಳಿದಾರರು ಯಾವುದೇ ಸಮಸ್ಯೆ ಎದುರಿಸಬಾರದು. ಇದಕ್ಕಾಗಿ ಈ ಕಾನೂನು ಜಾರಿಗೊಳ್ಳುವ ಹಂತದಲ್ಲೇ ಜನಪ್ರತಿನಿಧಿಗಳ ವಿಶೇಷ ಕಾಳಜಿ ಅಗತ್ಯವಿದೆ ಎಂದು ಹೇಳಿದರು.

 ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರಾದ ಡಾ. ಮಂತರ್ ಗೌಡ, ಕೊಡಗಿನ ಜಮ್ಮಾ-ಬಾಣೆ ಭೂಮಿ ವಿವಾದಗಳ ಪರಿಹಾರಕ್ಕಾಗಿ ಕರ್ನಾಟಕ ಭೂಕಂದಾಯ 2ನೇ ತಿದ್ದುಪಡಿ ವಿಧೇಯಕ-2025 ಅನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸುವಲ್ಲಿ ಕಂದಾಯ ಸಚಿವರಾದ ಕೃಷ್ಣಬೈರೇಗೌಡರು ತೋರಿದ ಇಚ್ಛಾಶಕ್ತಿ ಕೊಡಗಿನ ಜನರ ಪರವಾಗಿತ್ತು. ಕೊಡಗಿನ ಬಹುಕಾಲದ ಈ ಸಮಸ್ಯೆಯನ್ನು ಕಾನೂನು ಬದ್ಧವಾಗಿ ಪರಿಹರಿಸಬೇಕೆಂಬ ಮನಸ್ಸು ಸಚಿವರಿಗೆ ಹಿಂದಿನಿಂದಲೂ ಇತ್ತು. ಈ ಕಾರಣಕ್ಕಾಗಿ ಅವರು ಜಮ್ಮಾ ಭೂಮಿ ಸಮಸ್ಯೆಯ ಬಗ್ಗೆ ದೀರ್ಘವಾಗಿ ಅಧ್ಯಯನ ನಡೆಸಿದ್ದರು ಎಂದರಲ್ಲದೆ, ಈ ಕಾನೂನನ್ನು ಕೊಡಗಿನ ಜನತೆ ಸಮರ್ಪಕವಾಗಿ ಮತ್ತು ನ್ಯಾಯೋಚಿತವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

 ಶಾಸಕರನ್ನು ಸನ್ಮಾನಿಸಿ ಧನ್ಯವಾದ ಹೇಳಿದ ಸಂದರ್ಭದಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್ ನ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ಕೋಶಾಧಿಕಾರಿ ಹರಿಶ್ಚಂದ್ರ ಎ. ಹಂಸ, ನಿರ್ದೇಶಕರಾದ ಆಲೀರ ಎಂ. ರಶೀದ್, ಕೋಳುಮಂಡ ರಫೀಕ್, ಕೆಂಗೋಟಂಡ ಎಸ್. ಸೂಫಿ ಮತ್ತು ಪರವಂಡ ಎ. ಸಿರಾಜ್ ಅವರು ಉಪಸ್ಥಿತರಿದ್ದರು. ಜಿಲ್ಲೆಯ ಜಮ್ಮಾಬಾಣೆ ಭೂಮಿಗೆ ಸಂಬಂಧಿಸಿದ ಕರ್ನಾಟಕ ಕಂದಾಯ ಕಾನೂನು1964ರ ತಿದ್ದುಪಡಿ ವಿಧೇಯಕ ವನ್ನು ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಿಲ್ಲೆಯ ಇಬ್ಬರು ಶಾಸಕರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸುವಂತೆ ಕೆಎಂಎ ವತಿಯಿಂದ ತೀರ್ಮಾನಿಸಲಾಗಿತ್ತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0