ಕಾನೂರು ರಸ್ತೆಗೆ ಸ್ವಾತಂತ್ರ್ಯ ಹೋರಾಟಗಾರ ಕೋದೇಂಗಡ ಜಿ. ಕಾರ್ಯಪ್ಪ ಹೆಸರಿನ ನಾಮಕರಣ
ಪೊನ್ನಂಪೇಟೆ, ಜು. 15: ಪೊನ್ನಂಪೇಟೆಯ ಕಾನೂರು ರಸ್ತೆಗೆ ಸ್ವಾತಂತ್ರ್ಯ ಹೋರಾಟಗಾರ ಕೋದೇಂಗಡ ಜಿ. ಕಾರ್ಯಪ್ಪ ಅವರ ಹೆಸರನ್ನು ನಾಮಕರಣ ಮಾಡಲಾಗುತ್ತಿದ್ದು, ನಾಮಫಲಕ ಅನಾವರಣ ಕಾರ್ಯಕ್ರಮ ಜುಲೈ 18ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಕ್‌ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಕೊಟ್ಟ್ ಕತ್ತೀರ ಪಿ. ಸೋಮಣ್ಣ ತಿಳಿಸಿದ್ದಾರೆ.
ಗೋಣಿಕೊಪ್ಪದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ನಾಮಫಲಕವನ್ನು ಅನಾವರಣಗೊಳಿಸಲಿದ್ದಾರೆ ಎಂದು ಹೇಳಿದರು. 16ನೇ ವಯಸ್ಸಿನಲ್ಲೇ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಕೋದೇಂಗಡ ಜಿ. ಕಾರ್ಯಪ್ಪ ಅವರು ಮೂರು ಬಾರಿ ಬಂಧನಕ್ಕೊಳಗಾಗಿ ತಲಚೇರಿ, ಬೆಳಗಾವಿ ಹಾಗೂ ತಿರುಚಿರಾಪಳ್ಳಿಯ ಕಾರಾಗೃಹಗಳಲ್ಲಿ ಸೆರೆವಾಸ ಅನುಭವಿಸಿದ್ದರು. ಇಂತಹ ಮಹನೀಯರ ಹೆಸರನ್ನು ಶಾಶ್ವತವಾಗಿ ಉಳಿಸುವ ಉದ್ದೇಶದಿಂದ ಕಾನೂರು ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೊಳ್ಳಿಮಾಡ ಸಿ. ಕರುಂಬಯ್ಯ ಅವರೊಂದಿಗೆ ಕಾರ್ಯಪ್ಪ ಅವರು ಕಿರಿಯ ವಯಸ್ಸಿನಲ್ಲಿಯೇ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅವರ ದೇಶಸೇವೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದರು. ಕಾರ್ಯಪ್ಪ ಅವರ ಪುತ್ರ ಕೋದೇಂಗಡ ರವಿ ಹಾಗೂ ಕುಟುಂಬದವರು ಈ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ವೇದಿಕೆ ಸ್ಥಾಪಕ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು, ಅವರ ಹೆಸರನ್ನು ಆಯಾ ಗ್ರಾಮಗಳ ರಸ್ತೆಗಳಿಗೆ ನಾಮಕರಣ ಮಾಡುವ ಯೋಜನೆಯನ್ನು ವೇದಿಕೆ ರೂಪಿಸಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಜನಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಗೋಣಿಕೊಪ್ಪ ಬಸ್ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಕೊಳ್ಳಿಮಾಡ ಸಿ. ಕರುಂಬಯ್ಯ ಅವರ ಹೆಸರನ್ನು ನಾಮಕರಣ ಮಾಡಿರುವ ಮಾದರಿಯಲ್ಲಿ, ಪೊನ್ನಂಪೇಟೆ ಬಸ್ ನಿಲ್ದಾಣಕ್ಕೂ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನೇ ನಾಮಕರಣ ಮಾಡಬೇಕೆಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆ ಕಾರ್ಯದರ್ಶಿ ಚೇಂದೀರ ಬೋಪಣ್ಣ, ಖಜಾಂಚಿ ಐನಂಡ ಮಂದಣ್ಣ, ಜಂಟಿ ಕಾರ್ಯದರ್ಶಿ ನೆರೆಯಂಡಮ್ಮನ ಸುಬ್ರಮಣಿ, ನಿರ್ದೇಶಕರಾದ ಕೊಳ್ಳಿಮಾಡ ಚಿಪ್ಪಿ ಕಾರ್ಯಪ್ಪ, ಮಲ್ಲಂಡ ರಾಜ ಸುಬ್ಬಯ್ಯ, ಕೋದೇಂಗಡ ವಿಠಲ, ಮೇಚಮಾಡ ಪೊನ್ನಪ್ಪ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕಾರ್ಯಪ್ಪ ಅವರ ಪುತ್ರ ಕೋದೇಂಗಡ ರವಿ ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
