ಕೊಡಗು ಚೇಂಬರ್ ಆಫ್ ಕಾಮಸ್೯ನಿಂದ ಎನ್.ಎಂ.ಪಿ.ಟಿ. ಅಧ್ಯಕ್ಷರಿಗೆ ಪ್ರಸ್ತಾವನೆ ಸಲ್ಲಿಕೆ

Jul 12, 2026 - 18:32
 0  108
ಕೊಡಗು ಚೇಂಬರ್ ಆಫ್ ಕಾಮಸ್೯ನಿಂದ ಎನ್.ಎಂ.ಪಿ.ಟಿ. ಅಧ್ಯಕ್ಷರಿಗೆ ಪ್ರಸ್ತಾವನೆ ಸಲ್ಲಿಕೆ

ಮಡಿಕೇರಿ ಜು 12: ಕೊಡಗು ಜಿಲ್ಲೆಗೆ ನವ ಮಂಗಳೂರು ಬಂದರು ಸಂಸ್ಥೆಯಿಂದ ಶಾಶ್ವತವಾದ ಜನೋಪಯೋಗಿ ಯೋಜನೆಯನ್ನು ಜಾರಿಗೊಳಿಸಲು ಬದ್ದ ಎಂದು ಸಂಸ್ಥೆಯ ಅಧ್ಯಕ್ಷ ಸುಶೀಲ್ ಕುಮಾರ್ ಸಿಂಗ್ ಭರವಸೆ ನೀಡಿದ್ದಾರೆ.

 ಮಡಿಕೇರಿಗೆ ಭೇಟಿ ನೀಡಿದ್ದ ಸುಶೀಲ್ ಕುಮಾರ್ ಸಿಂಗ್ ಅವರನ್ನು ತಾಜ್ ವಿವಾಂತ ರೆಸಾಟ್೯ನಲ್ಲಿ ಭೇಟಿ ಮಾಡಿದ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮಸ್೯ ಜಿಲ್ಲಾಧ್ಯಕ್ಷ ಬಿ.ಆರ್. ನಾಗೇಂದ್ರಪ್ರಸಾದ್ ನೇತೖತ್ವದ ನಿಯೋಗವು ವಿವಿಧ ಬೇಡಿಕೆಗಳ ಪ್ರಸ್ತಾವನೆ ಸಲ್ಲಿಸಿತು.

ಜಿಲ್ಲಾ ಚೇಂಬರ್ ಆಫ್ ಕಾಮಸ್೯ನ ಗೌರವ ಸಲಹೆಗಾರ ಜಿ.ಚಿದ್ವಿಲಾಸ್ ಈ ಸಂದಭ೯ ಪ್ರಸ್ತಾವನೆ ಸಲ್ಲಿಸಿ, ಕೊಡಗು ಜಿಲ್ಲೆಯಿಂದ ಬಹುತೇಕ ಕಾಫಿ ವಹಿವಾಟು ನವ ಮಂಗಳೂರು ಬಂದರಿನ ಮೂಲಕ ಆಗುತ್ತಿದೆ. ನವಮಂಗಳೂರಿನ ಆಥಿ೯ಕ ಲಾಭಕ್ಕೂ ಕೊಡಗಿನಿಂದ ಸರಬರಾಜಾಗುತ್ತಿರುವ ಕಾಫಿ ಪರೋಕ್ಷವಾಗಿ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ನವಮಂಗಳೂರು ಬಂದರು ಟ್ರಸ್ಟ್ ನಿಂದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿ ಬಳಸಿ ಕೊಡಗು ಜಿಲ್ಲೆಯಲ್ಲಿ ಜನರಿಗೆ ಪ್ರಯೋಜನವಾಗುವಂಥ ಶಾಶ್ವತ ಯೋಜನೆಯನ್ನು ಜಾರಿಗೊಳಿಸುವಂತೆ ಕೋರಿದರು.

ಈ ಪ್ರಸ್ತಾವನೆಗೆ ಸುಶೀಲ್ ಕುಮಾರ್ ಪೂರಕವಾಗಿ ಸ್ಪಂದಿಸಿದರು. ಈಗಾಗಲೇ ಮೈಸೂರು ಕುಶಾಲನಗರ ರೈಲ್ವೆ ಸಂಪರ್ಕ ಸರ್ವೇ ನಡೆದಿದ್ದು,. ಕೊಪ್ಪ ಭಾಗದಲ್ಲಿ ನಿಲುಗಡೆ ಯೋಜನೆ ಇದೆ, ಅದನ್ನೂ ಕಾರ್ಯರೂಪಕ್ಕೆ ತರಲು ಒತ್ತಡ ಹಾಕುವಂತೆ ಅವರು ಮನವಿ ಮಾಡಿದರು .

ಭಾರತದಲ್ಲಿ ಕೇವಲ ಒಂದು ಲಕ್ಷ ಟನ್ ಅಷ್ಟು ಕಾಫಿ ಆಂತರಿಕವಾಗಿ ಬಳಸಲಾಗುತ್ತಿದ್ದು ಅದರ ಪ್ರಮಾಣ ಹೆಚ್ಚಿಸಲು ಸರ್ಕಾರ ಪ್ರಯತ್ನಿಸಲು ಸಂಬಂಧಿಸಿದವರನ್ನು ಸಂಪರ್ಕಿಸಬೇಕು, ಮಡಿಕೇರಿಯಿಂದ ಸಂಪಾಜೆವರೆಗೆ ಸರ್ವ ಋತು ರಸ್ತೆಯನ್ನು ನಿರ್ಮಿಸಬೇಕು , ಅದರಿಂದ ಪ್ರತಿ ವರ್ಷ ಮಳೆಗಾಲದಲ್ಲಿ 3 ತಿಂಗಳು ಭಾರಿ ವಾಹನ ಸಂಚಾರ ಸ್ಥಗಿತವಾಗದಂತೆ ಸಾಧ್ಯ, ಈ ಬಗ್ಗೆ ಸಚಿವರೊಂದಿಗೆ. ಚಚಿ೯ಸಿ ಸಮಸ್ಯೆ ಪರಿಹರಿಸುವಂತೆ ಚಿದ್ವಿಲಾಸ್ ವಿನಂತಿಸಿದರು.

 ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ನ ವಕ್ತಾರ ಕೆ.ಕೆ. ವಿಶ್ವನಾಥ್ ಮಾತನಾಡಿ, ಕುಶಾಲನಗರದಿಂದ 190 ಕಿ.ಮೀ. ಅಂತರದಲ್ಲಿರುವ ಮಂಗಳೂರು ಬಂದರಿಗೆ ದಿನನಿತ್ಯ 100 ಕಾಫಿ ಕಂಟೈನರ್ ಗಳಂತೆ ವಾಷಿ೯ಕ 15 ಸಾವಿರ ಕಂಟೈನರ್ ಗಳಷ್ಟು ಕಾಫಿ ಸರಬರಾಜಾಗುತ್ತಿದೆ. ಮಳೆಗಾಲದಲ್ಲಿ ಮಡಿಕೇರಿ - ಮಂಗಳೂರು ಘಾಟ್ ರಸ್ತೆಯಲ್ಲಿ ಲಾರಿಗಳ ಸಂಚಾರಕ್ಕೆ ನಿಭ೯ಂಧ ಹೇರಲಾಗುತ್ತದೆ.

ಈ ದಿನಗಳಲ್ಲಿ ಶಿರಾಡಿ ಘಾಟ್, ಆಗುಂಬೆ ಸೇರಿದಂತೆ ಮಲೆನಾಡಿನ ಎಲ್ಲಾ ಮುಖ್ಯ ರಸ್ತೆಗಳು ಬಂದ್ ಆಗುತ್ತವೆ. ಹೀಗಾಗಿ ಸುತ್ತಿ ಬಳಸಿ ಶಿವಮೊಗ್ಗ - ತೀಥ೯ಹಳ್ಳಿ ಮೂಲಕ ಕಾಫಿ ಕಂಟೈನರ್ ಗಳ ಸಾಗಾಣೆಯಿಂದ ದುಬಾರಿ ವೆಚ್ಚವಾಗುತ್ತಿದೆ. ಈ ನಿಟ್ಟಿನಲ್ಲಿ ಕೂಡಿಗೆಯಿಂದ ಬೇಲೂರಿಗೆ ರೈಲ್ವೇ ಸಂಪಕ೯ ಮಾಗ೯ದ ಅಗತ್ಯವಿದೆ ಎಂದರು.

 ಕೂಡಿಗೆಯಿಂದ ಬೇಲೂರಿಗೆ ಸಂಪಕ೯ ಕಲ್ಪಿಸಿದರೆ ಬೇಲೂರಿನಿಂದ ಮಂಗಳೂರಿಗೆ ಈಗಾಗಲೇ ಇರುವ ರೈಲು ಮಾಗ೯ದ ಮೂಲಕ ಕಾಫಿ ಸಾಗಾಣೆ ಸುಲಭಸಾಧ್ಯವಾಗಿ ಸಾಗಾಣೆ ವೆಚ್ಚವೂ ಕಡಮೆಯಾಗಲಿದೆ ಎಂದೂ ವಿಶ್ವನಾಥ್ ಮಾಹಿತಿ ನೀಡಿದರು. ಈ ನಿಟ್ಟಿನಲ್ಲಿ ಕೇಂದ್ರ ರೈಲ್ವೇ ಸಚಿವಾಲಾಯದ ಪ್ರಮುಖರೊಂದಿಗೆ ಚಚಿ೯ಸುವುದಾಗಿ ಸುಶೀಲ್ ಕುಮಾರ್ ಭರವಸೆ ನೀಡಿದರು.

ಮಡಿಕೇರಿ - ಮಂಗಳೂರು ನವಬಂದರಿಗೆ ಸವ೯ ಋತು ರಸ್ತೆಯನ್ನೂ ನಿಮಾ೯ಣ ಮಾಡುವ ಬಗ್ಗೆಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಮುಖರೊಂದಿಗೆ ಚಚಿ೯ಸುವುದಾಗಿ ಹೇಳಿದ ಸುಶೀಲ್ ಕುಮಾರ್, ನವಮಂಗಳೂರು ಬಂದರುಗೆ ಕೊಡಗಿನ ಕಾಫಿ ಉದ್ಯಮಿಗಳು ವಷ೯ಂಪ್ರತಿ ಉತ್ತಮ ಸಂಖ್ಯೆಯಲ್ಲಿ ಕಾಫಿ ನೀಡುವದರಿಂದಾಗಿ ಬಂದರಿನ ಆಥಿ೯ಕ ವಹಿವಾಟಿಗೆ ನೆರವಾಗಿದೆ ಎಂದೂ ಶ್ಲಾಘಿಸಿದರು.

ಜಿಲ್ಲಾ ಚೇಂಬರ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ, ಕಾಫಿ ಉದ್ಯಮವನ್ನೇ ಕೇಂದ್ರೀಕರಿಸಿರುವ ಕೊಡಗು ಜಿಲ್ಲೆಗೆ ಪರಿಸರ ಸ್ನೇಹಿ ಯೋಜನೆಗಳ ಅಗತ್ಯವಿದೆ. ಇದರಿಂದ ಕೊಡಗಿನ ಯುವಜನತೆ ಭವಿಷ್ಯದಲ್ಲಿ ಇದೇ ಜಿಲ್ಲೆಯಲ್ಲಿ ಜೀವನ ರೂಪಿಸಲು ಸಾಧ್ಯವಾಗಲಿದೆ ಎಂದರು. ಜಿ.ಚಿದ್ವಿಲಾಸ್ ಮಾತನಾಡಿ, ಕೊಡಗಿನಲ್ಲಿ ಯಾವುದೇ ಪ್ರಗತಿ ಯೋಜನೆ ಕೈಗೊಂಡರೂ ಖಂಡಿತವಾಗಿಯೂ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಗಮನ ಹರಿಸಬೇಕಾಗಿದ್ದು ಅತ್ಯಗತ್ಯ. ಪರಿಸರದೊಂದಿಗೆ ಕೊಡಗಿನ ಜನತೆ ಭಾವನಾತ್ಮಕ ಸಂಬಂಧ ಹೊಂದಿದ್ದು ಪರಿಸರಕ್ಕೆ ಹಾನಿಯಾಗುವ ಯಾವುದೇ ಯೋಜನೆ ಸ್ವಾಗತಾಹ೯ವಲ್ಲ. ಆದರೆ ಪರಿಸರ ಸ್ನೇಹಿಯಾಗಿಯೂ ಹಲವು ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಿದೆ ಎಂದು ತಿಳಿಸಿದರು.

ಭಾರತೀಯ ಸೇನಾ ಪಡೆಯಲ್ಲಿ ಕೊಡಗಿನ ಕಾಫಿಯನ್ನು ಪರಿಚಯಿಸುವ ಮೂಲಕ ಕೊಡಗಿನ ಕಾಫಿ ಬ್ರಾಂಡ್ ನ್ನು ಸೈನಿಕರಿಗೆ ತಲುಪುವಂತೆ ಮಾಡಿ, ಕಾಫಿ ಕೖಷಿಕರಿಗೆ ನೆರವಾಗಿ ಎಂದೂ ಚಿದ್ವಿಲಾಸ್ ಸಲಹೆ ನೀಡಿದರು.

 ಕೊಡಗು ಚೇಂಬರ್ ಆಫ್ ಕಾಮಸ್೯ ನಿಯೋಗದಲ್ಲಿ ಮಡಿಕೇರಿ ಚೇಂಬರ್ ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್, ಮಡಿಕೇರಿ ಚೇಂಬರ್ ನಿದೇ೯ಶಕ ಎಂ.ಧನಂಜಯ್, ರೋಟರಿ ಸಂಸ್ಥೆಯ ಜಿಲ್ಲಾ ನಿದೇ೯ಶಕ ಅನಿಲ್ ಹೆಚ್.ಟಿ. ಚೇಂಬರ್ ನಿದೇ೯ಶಕರಾದ ಕುಶಾಲನಗರದ , ಎಂ.ಡಿ. ರಂಗಸ್ವಾಮಿ, ಪಿ.ಎಸ್.ಪ್ರಶಾಂತ್. ಎಸ್.ಎನ್. ರಾಜೇಂದ್ರ ಇದ್ದರು. ನವಮಂಗಳೂರು ಬಂದರಿನ ಸಾರಿಗೆ ನಿಯಂತ್ರಣಾಧಿಕಾರಿ ಸಿದ್ದೇಶ್ ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0