ಕೋಲಾರ: ಜಾತಿ ಸಮೀಕ್ಷೆಗೆ ತೆರಳಿ ನಾಪತ್ತೆಯಾಗಿದ್ದ ಶಿಕ್ಷಕಿಯ ಮೃತದೇಹ ಕೆರೆಯಲ್ಲಿ ಪತ್ತೆ

Oct 15, 2025 - 20:48
 0  2k
ಕೋಲಾರ: ಜಾತಿ ಸಮೀಕ್ಷೆಗೆ ತೆರಳಿ ನಾಪತ್ತೆಯಾಗಿದ್ದ ಶಿಕ್ಷಕಿಯ ಮೃತದೇಹ ಕೆರೆಯಲ್ಲಿ ಪತ್ತೆ

ಕೋಲಾರ, ಅ.15: ಜಾತಿವಾರು ಸಮೀಕ್ಷೆ ಕಾರ್ಯಕ್ಕೆ ತೆರಳಿ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಶಿಕ್ಷಕಿಯ ಮೃತದೇಹ ಬುಧವಾರ ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಸಮೀಪದ ಅಯ್ಯಪ್ಪಳ್ಳಿ ಕೆರೆಯಲ್ಲಿ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

ಮೃತಪಟ್ಟವರನ್ನು ಕೋಲಾರ ನಗರದ ಮಹಾಲಕ್ಷ್ಮಿ ಬಡಾವಣೆಯ ಅಖರ್ ಬೇಗಂ (50) ಎಂದು ಗುರುತಿಸಲಾಗಿದೆ.ಹಅವರು ಕೋಲಾರ ತಾಲ್ಲೂಕಿನ ಕೆ.ಬಿ.ಹೊಸಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಅಖರ್ ಬೇಗಂ ಅವರನ್ನು ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿವಾರು ಸಮೀಕ್ಷೆ ಕಾರ್ಯದ ಭಾಗವಾಗಿ ನರಸಾಪುರ ಗ್ರಾಮಕ್ಕೆ ನಿಯೋಜಿಸಲಾಗಿತ್ತು. ಸೋಮವಾರ ಬೆಳಿಗ್ಗೆ ಸಮೀಕ್ಷೆಗೆ ತೆರಳಿದ ಬಳಿಕ ಅವರು ಸಂಪರ್ಕಕ್ಕೆ ಸಿಗದೇ ಇದ್ದರು. ಮೊಬೈಲ್‌ ಮನೆಯಲ್ಲಿ ಬಿಟ್ಟು, ಗುರುತಿನ ಚೀಟಿ ತೆಗೆದುಕೊಂಡು ತೆರಳಿದ್ದರೆಂಬ ಮಾಹಿತಿ ದೊರಕಿದೆ.

 ಕುಟುಂಬಸ್ಥರು ಆತಂಕಗೊಂಡು ಕೋಲಾರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು, ಅಧಿಕಾರಿಗಳು ಹಾಗೂ ಕುಟುಂಬದವರು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.

ಬುಧವಾರ ಮಧ್ಯಾಹ್ನ ಅಯ್ಯಪ್ಪಳ್ಳಿ ಕೆರೆಯಲ್ಲಿ ಶವ ತೇಲಾಡುತ್ತಿರುವುದು ಕಂಡುಬಂದಿದೆ. ಕೆರೆ ದಡದಲ್ಲಿ ಶಿಕ್ಷಕಿಯ ಬ್ಯಾಗ್ ಹಾಗೂ ಬಸ್ ಟಿಕೆಟ್ ಪತ್ತೆಯಾಗಿದ್ದು, ಪ್ರಕರಣದ ಕುರಿತು ಹಲವಾರು ಅನುಮಾನಗಳು ಮೂಡಿವೆ.

ಸಮೀಕ್ಷೆಯ ಒತ್ತಡ, ಸುತ್ತಾಟ ಹಾಗೂ ಕೆಲಸದ ಒತ್ತಡದಿಂದಾಗಿ ಶಿಕ್ಷಕಿಯು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂಬ ಮಾಹಿತಿ ಸಹೋದ್ಯೋಗಿಗಳಿಂದ ಲಭ್ಯವಾಗಿದೆ. ಇದೇ ಕಾರಣದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

 ಅಖರ್ ಬೇಗಂ ಈ ಹಿಂದೆ ಬೇತಮಂಗಲ ಹೋಬಳಿಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. “ಬೇತಮಂಗಲ ಕೆರೆಗಳು ತುಂಬಿವೆ, ಹೋಗಿ ನೋಡಬೇಕು” ಎಂಬುದಾಗಿ ಇತ್ತೀಚೆಗೆ ಹೇಳಿಕೊಂಡಿದ್ದರು ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ.

 ಬೇತಮಂಗಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 3
Sad Sad 2
Wow Wow 0