ಕುಶಾಲನಗರ : ಶಾಲಾ ಮಕ್ಕಳ ಕರ್ನಾಟಕ ದರ್ಶನ ಪ್ರವಾಸಕ್ಕೆ ಬಿಇಓ ಚಾಲನೆ; ಪ್ರವಾಸವು ಮಕ್ಕಳಿಗೆ ಜೀವನದ ಅನುಭವ ನೀಡುತ್ತದೆ: ಬಿಇಓ ಕೃಷ್ಣಪ್ಪ
ಕುಶಾಲನಗರ, ಜ.21: ಶಾಲಾ ಶಿಕ್ಷಣ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಂಯುಕ್ತ ಆಶ್ರಯದಲ್ಲಿ "*ಕರ್ನಾಟಕ ದರ್ಶನ*" ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು ಹಾಗೂ ಪ್ರವಾಸಿ ತಾಣಗಳ ಉಚಿತ ಅಧ್ಯಯನ ಪ್ರವಾಸಕ್ಕೆ ಬುಧವಾರ ಕುಶಾಲನಗರ ತಾಲ್ಲೂಕಿನಿಂದ ಹೊರಟ ಶಾಲಾ ಮಕ್ಕಳಿಗೆ ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಚಾಲನೆ ನೀಡಿ ಶುಭ ಕೋರಿದರು.
ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು ಹಾಗೂ ಪ್ರವಾಸಿ ತಾಣಗಳ ಅಧ್ಯಯನ ಪ್ರವಾಸಕ್ಕೆ ಕುಶಾಲನಗರ ಪಟ್ಟಣದ ಪಿ.ಎಂ.ಶ್ರೀ.ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾವರಣದಲ್ಲಿ ಏರ್ಪಡಿಸಿದ್ದ ಸರ್ಕಾರಿ ಬಸ್ ನಲ್ಲಿ ತೆರಳಿದ ಪ್ರವಾಸ ತಂಡದ ಪಯಣಕ್ಕೆ ಹಸಿರು ನಿಶಾನೆ ತೋರಿಸಿ ಮಕ್ಕಳಿಗೆ ಪ್ರವಾಸಿ ಕಿಟ್ ವಿತರಿಸಿ ಮಾತನಾಡಿದರು. ಈ ಪ್ರವಾಸವು ಮಕ್ಕಳಿಗೆ ಪಠ್ಯ ಪುಸ್ತಕಗಳಿಂದ ಲಭ್ಯವಾಗುವ ಜ್ಞಾನಕ್ಕಿಂತ ಹೊರತಾಗಿ ಪಠ್ಯೇತರ ವಿಷಯಗಳ ಅರಿವು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ವಿದ್ಯಾರ್ಥಿ ಜೀವನದಲ್ಲಿ ಕೈಗೊಳ್ಳಬಹುದಾದ ಶೈಕ್ಷಣಿಕ ಪ್ರವಾಸಗಳು ಶಾಶ್ವತ ಕಲಿಕೆಯೊಂದಿಗೆ ಜೀವನದ ಅನುಭವ ನೀಡುತ್ತವೆ ಎಂದರು. ಶೈಕ್ಷಣಿಕ ಪ್ರವಾಸವು ಮಕ್ಕಳಿಗೆ ಕಲಿಕೆಗೆ ಪೂರಕವಾಗಿ ಪಠ್ಯ ಚಟುವಟಿಕೆಗಳೊಂದಿಗೆ ಇತಿಹಾಸ, ವಿಜ್ಞಾನ, ಭೌಗೋಳಿಕ ಪರಿಸರ ಮತ್ತಿತರ ಸಂಗತಿಗಳ ವಾಸ್ತವಿಕ ಅನುಭವದ ಮೂಲಕ ಹಲವು ವಿಚಾರಗಳ ಕಲಿಕೆಯಾಗುವುದರಿಂದ ಪ್ರವಾಸಗಳು ಮಕ್ಕಳ ಜೀವನದಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ಬಿಇಓ ಕೃಷ್ಣಪ್ಪ ಹೇಳಿದರು.
ಮಕ್ಕಳಲ್ಲಿ ಶೈಕ್ಷಣಿಕ ಜೀವನ ರೂಪಿಸಿಕೊಳ್ಳುವ ಮಾರ್ಗದರ್ಶನ ಸಿಗುವ ನಿಟ್ಟಿನಲ್ಲಿ ರಾಜ್ಯದ ಶೈಕ್ಷಣಿಕ ಮತ್ತು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಲು ಉತ್ತಮ ಅವಕಾಶ ಕಲ್ಪಿಸಲಾಗಿದೆ ಎಂದರು. ಪಠ್ಯ ಪುಸ್ತಕಗಳಿಂದ ಲಭ್ಯವಾಗುವ ಜ್ಞಾನಕ್ಕಿಂತ ಹೊರತಾಗಿ ಪಠ್ಯೇತರ ವಿಷಯಗಳ ಅರಿವು ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಬಿಇಓ ಕೃಷ್ಷಪ್ಪ ಹೇಳಿದರು.
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಮಕ್ಕಳಲ್ಲಿ ಶೈಕ್ಷಣಿಕ ಜೀವನ ರೂಪಿಸಿಕೊಳ್ಳುವ ಮಾರ್ಗದರ್ಶನ ಸಿಗುವ ನಿಟ್ಟಿನಲ್ಲಿ ರಾಜ್ಯದ ಶೈಕ್ಷಣಿಕ ಮತ್ತು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಲು ಅವಕಾಶ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಮಕ್ಕಳ ಪ್ರವಾಸದ ಕುರಿತು ಮಾಹಿತಿ ನೀಡಿದ ಪ್ರವಾಸಿ ಮಾರ್ಗದರ್ಶಿ ಶಿಕ್ಷಕ ಕೆ.ಬಿ.ರಾಧಾಕೃಷ್ಣ ಮಾತನಾಡಿ, ಇಲಾಖೆಯ ವತಿಯಿಂದ ತಾಲ್ಲೂಕಿನ 100 ಮಂದಿಗೆ ಅವಕಾಶ ಕಲ್ಪಿಸಿದ್ದು, ಪ್ರವಾಸದಲ್ಲಿ ಮಕ್ಕಳಿಗೆ ಪ್ರವಾಸೋದ್ಯಮ ಇಲಾಖೆಯ ಮೂಲಕ ಉಚಿತವಾಗಿ ಊಟೋಪಚಾರ ಹಾಗೂ ವಸತಿ ವ್ಯವಸ್ಥೆ ಕಲ್ಪಿಸುತ್ತಿದೆ ಎಂದರು. 4 ದಿನಗಳ ಕಾಲದ ಪ್ರವಾಸದಲ್ಲಿ ಬೇಲೂರು- ಹಳೇಬೀಡು, ಶ್ರವಣಬೆಳಗೂಳ, ಚಿತ್ರದುರ್ಗ, ಹಂಪಿ, ಟಿ.ಬಿ.ಡ್ಯಾಂ,ಗೋಕರ್ಣ, ಮುರುಡೇಶ್ವರ, ಉಡುಪಿ ಮತ್ತಿತರ ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಸ್.ಪ್ರಸನ್ನ ಮಾತನಾಡಿ, ಇಂತಹ ಪ್ರವಾಸವು ಅನುಭವ ಮತ್ತು ವೀಕ್ಷಣೆಯ ಮೂಲಕವೇ ವಿದ್ಯಾರ್ಥಿಗಳ ವ್ಯಕ್ತಿತ್ವ ಹಾಗೂ ದೃಷ್ಟಿಕೋನ ವಿಸ್ತಾರಗೊಳ್ಳಲು ಸಹಕಾರಿಯಾಗಿದೆ ಎಂದರು.
ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಸಮನ್ವಯಾಧಿಕಾರಿ ರುಕ್ಮಾಂಗದ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹೇಂದ್ರ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಆರ್.ರತ್ನಕುಮಾರ್, ತಾಲ್ಲೂಕು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ಸುಜಾತ, ಪ್ರವಾಸಿ ಮಾರ್ಗದರ್ಶಿ ಶಿಕ್ಷಕರಾದ ಕೆ.ಬಿ.ರಾಧಾಕೃಷ್ಣ, ಯಾದಕುಮಾರಿ, ವಿವಿಧ ಶಾಲೆಗಳ ಶಿಕ್ಷಕರಾದ ಟಿ.ಆರ್.ದಿನೇಶ್, ಎಂ.ತುಳಸಿ, ಚೇತನ್, ಎಚ್.ಎಂ.ಪ್ರಕಾಶ್, ಇತರರು ಇದ್ದರು. ಇದೇ ವೇಳೆ ಸೋಮವಾರಪೇಟೆ ಯಿಂದ ಒಂದು ಬಸ್ ಪ್ರವಾಸಕ್ಕೆ ತೆರಳಿದ್ದು, ಮಾರ್ಗದರ್ಶಿ ಶಿಕ್ಷಕರಾದ ಎಂ.ಎಲ್.ಸುಕುಮಾರಿ ಮತ್ತು ಎಚ್.ಸಿ.ಬಸವರಾಜ್ ಮಕ್ಕಳ ಜತೆ ಪ್ರವಾಸಕ್ಕೆ ತೆರಳಿದರು.