ಕುಶಾಲನಗರ; ತೊರೆನೂರು ವಿರಕ್ತ ಮಠದಲ್ಲಿ ಹಿರಿಯ ಶ್ರೀ ಮಹಾಂತ ಸ್ವಾಮೀಜಿ ಸಂಸ್ಮರಣೋತ್ಸವ

ಕುಶಾಲನಗರ; ತೊರೆನೂರು ವಿರಕ್ತ ಮಠದಲ್ಲಿ ಹಿರಿಯ ಶ್ರೀ ಮಹಾಂತ ಸ್ವಾಮೀಜಿ ಸಂಸ್ಮರಣೋತ್ಸವ

ಕುಶಾಲನಗರ;ಮನುಷ್ಯ ನಿರ್ಮಿಸಲಾಗದ ಭಗವಂತನ ಸೃಷ್ಟಿಯ ನದಿ,ಸರೋವರಗಳು, ನೀರು,ಮಣ್ಣು, ಗಾಳಿ ಮೊದಲಾದ ಸುಂದರ ಪರಿಸರವನ್ನು ನಾವು ಹದಗೆಡಿಸದೇ ಸುಮ್ಮನಿದ್ದರೆ ಸಾಕು ಅದೇ ನಾವು ಭಗವಂತನಿಗೆ ಸಲ್ಲಿಸುವ ಕಾಣಿಕೆ ಎಂದು ಸುತ್ತೂರು ವೀರಸಿಂಹಾಸನ ಪೀಠದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅಭಿಪ್ರಾಯಿಸಿದರು.

ಕುಶಾಲನಗರ ತಾಲ್ಲೂಕು ತೊರೆನೂರು ವಿರಕ್ತ ಮಠದಲ್ಲಿ ಹಿರಿಯ ಶ್ರೀ ಮಹಾಂತ ಸ್ವಾಮೀಜಿ ಸಂಸ್ಮರಣೋತ್ಸವ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಹನ್ನೆರಡನೇ ಶತಮಾನದ ಶರಣರ ಚಿಂತನೆಗಳು ಎಲ್ಲಾ ಕಾಲಘಟ್ಟಕ್ಕೂ ಪ್ರಸ್ತುತ ವಾಗಿದ್ದು, ಎಲ್ಲಾ ವಚನಗಳಲ್ಲಿ ವೈಜ್ಞಾನಿಕ ನೆಲೆಗಟ್ಟು ಇದೆ. ಅನುಭವ ಮಂಟಪದಲ್ಲಿ ಅಲ್ಲಮಪ್ರಭುವಿನಷ್ಟೇ ಸಮಾನ ಅವಕಾಶಗಳು ಎಲ್ಲಾ ಶರಣರಿಗಿತ್ತು. ಸಮಾನತೆಗಾಗಿ ಹೋರಾಟ ಇನ್ನೂ ಜೀವಂತವಾಗಿರುವುದು ವಿಷಾದನೀಯ.

ಭಗವಂತ ಭಕ್ತನ ನಡುವಿನ ನೇರ ಒಡನಾಟವೇ ಇಷ್ಟಲಿಂಗ ಪರಿಕಲ್ಪನೆ. ಸಾಮಾಜಿಕವಾಗಿ ಮೌಲ್ಯಯುತವಾದ ಜೀವನ ನಡೆಸಲು ಪೂರಕ. ಅಂತರಂಗ ಬಹಿರಂಗದ ಮದಗಳು ದೂರವಾದರೆ ಭಗವಂತನ ಬಳಿ ಹೋಗುತ್ತೇವೆ. ಭಗವಂತನ ಸೃಷ್ಟಿ ಹೊರತಾಗಿ ಮನುಷ್ಯನ ಸೃಷ್ಟಿ ಏನೇನೂ ಈ ಭೂಮಿಯಲ್ಲಿ ಇಲ್ಲ. ನಾನತ್ವ, ಅಹಂಕಾರ ಎರಡೂ ಕೂಡ ವಿನಾಶಕ್ಕೆ ಮೂಲ. ನಿಜವಾದ ಜ್ಞಾನಿಯಾದವ ನಿತ್ಯವೂ ಕಲಿಕೆಯತ್ತ ನಿರತನಾಗಿರಬೇಕು ಎಂದು ಶ್ರೀಗಳು ಹೇಳಿದರು.

 ಕೊಡಗು ವಿವಿ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ಅನುಭಾವದ ನುಡಿಗಳಾಡಿ ಸದ್ಭಾವನೆ, ಸತ್ ಚಿಂತನೆ, ಸನ್ನಡತೆ ಪ್ರತಿಯೊಬ್ಬರಲ್ಲೂ ಅಂತರ್ಗತವಾಗಬೇಕು. ಸಮಾಜದಲ್ಲಿ ಇಂದಿನ ಬಹಳಷ್ಟು ಮಂದಿಯ ದುಃಖಕ್ಕೆ ಆಸೆಯೇ ಮೂಲವಾಗಿದ್ದು, ಹನ್ನೆರಡನೇ ಶತಮಾನದ ಮಹಾಶರಣೆ ಆಯ್ದಕ್ಕಿ ಲಕ್ಕಮ್ಮನ ಆದರ್ಶಗಳನ್ನು ಅರಿಯಬೇಕಿದೆ. ಸದ್ಬಿಚಾರ ಸನ್ನಡತೆ, ಅನುಭಾವದ ಚಿಂತನೆಗಳತ್ತ ತೆರೆದುಕೊಳ್ಳುವ ಮೂಲಕ ಮಾನಸಿಕ ತುಮುಲಗಳನ್ನು ದೂರ ಮಾಡಬೇಕಿದೆ. ಅಧಿಕಾರ, ಆಸ್ತಿ ಅಂತಸ್ತುಗಳ ಹಿಂದೆ ಹೋಗಿ ನೆಮ್ಮದಿ ಹಾಳು ಮಾಡಿಕೊಳ್ಳಬಾರದು ಎಂದು ನುಡಿದ ಅಶೋಕ್ ಸಂಗಪ್ಪ ಕಾಯಕ ಹಾಗು ದಾಸೋಹ ಪರಿಕಲ್ಪನೆ ಕುರಿತು ವಿಮರ್ಶಿಸಿದರು.

ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಧುನಿಕ ಜೀವನ ಪದ್ಧತಿಯಿಂದಾಗಿ ನೈತಿಕ ಮೌಲ್ಯಗಳು ನಶಿಸುತ್ತಿದ್ದು, ಇಂದಿನ ಮಕ್ಕಳಿಗೆ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಶಿಕ್ಷಣದ ಅಗತ್ಯವಿದೆ. ಈಗ ಮನುಷ್ಯನಿಗೆ ಎಲ್ಲವೂ ಇದೆ. ಆದರೆ ಯಾರಿಗೂ ನೆಮ್ಮದಿಯ ಹುಡುಕಾಟದಲ್ಲಿದ್ದಾರೆ. ದ್ವೇಷ ಅಸೂಯೆ ಗಳಲ್ಲಿ ಜನ ಮುಳುಗಿದ್ದಾರೆ.

ಬಹಳಷ್ಟು ಸಂಪಾದಿಸಿದರೂ ಕೂಡ ಬರಿಗೈಲಿ ಹೋಗುವ ಮನುಷ್ಯ ಪ್ರಕೃತಿ ಸಂಪತ್ತನ್ನು ನಾಶ ಮಾಡಿರುವ ಪರಿಣಾಮವೇ ತಾಪಮಾನ ಏರಿಕೆ. ಭೂಮಿ ಮೇಲೆ ಪ್ರಾಣಿ ಪಕ್ಷಿಗಳಷ್ಟು ನೆಮ್ಮದಿಯ ಜೀವನ ಮನುಷ್ಯನಿಗೆ ಇಲ್ಲ. ಜಾಗತಿಕ ತಾಪಮಾನ ಹೆಚ್ಚುತ್ತಿದೆ. ವಾಯುಭಾರ ಕುಸಿಯುತ್ತಿದೆ. ಹವಾಗುಣದ ತಾಳ ತಪ್ಪಿದೆ. ಹಾಗಾಗಿ ಇಂದು ಪರಿಸರ ಸಮ್ಮೇಳನ ಎಲ್ಲೆಡೆ ಅಗತ್ಯವಿದೆ ಎಂದು ರಾಮಸ್ವಾಮಿ ಹೇಳಿದರು. ತೊರೆನೂರು ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭ ಸಮಾಜದ ವಿವಿಧ ಕ್ಷೇತ್ರಗಳ ಶಿರಂಗಾಲದ ಎಸ್.ವಿ.ನಂಜುಂಡಪ್ಪ, ಮರೂರಿನ ಹೆಚ್.ವಿ.ಶಿವರುದ್ರಪ್ಪ, ಕುಶಾಲನಗರದ ಡಾ.ಹೇಮಲತಾ, ತೊರೆನೂರಿನ ಟಿ.ಬಿ.ಜಗದೀಶ್ ಅವರನ್ನು ಗೌರವಿಸಲಾಯಿತು.

ಬೆಟ್ಟದಪುರ ಮಠದ ಶ್ರೀ ಚನ್ನವೀರದೇಶೀಕೇಂದ್ರ ಸ್ವಾಮೀಜಿ, ಗಾವಡಗೆರೆ ಮಠದ ಶ್ರೀ ನಟರಾಜ ಸ್ವಾಮೀಜಿ, ಹಾಸನದ ತಣ್ಣೀರು ಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ, ವಿರಾಜಪೇಟೆ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಸೋಮವಾರ ಪೇಟೆಯ ಶ್ರೀ ನಿಶ್ಚಲನಿರಂಜನ ಸ್ವಾಮೀಜಿ, ಮನೆಹಳ್ಳಿ ಮಠದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ ಇದ್ದರು.

ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ವಿ.ಶಿವಪ್ಪ, ಪ್ರಧಾನ ಕಾರ್ಯದರ್ಶಿ ಸಾಂಬಶಿವಯ್ಯ, ಕೋಶಾಧಿಕಾರಿ ಹೆಚ್.ಪಿ.ಉದಯಕುಮಾರ್, ಕುಶಾಲನಗರ ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ಎಂ.ಮಧುಸೂದನ್, ತೊರೆನೂರು ಹೆಚ್.ಬಿ.ಚಂದ್ರಪ್ಪ ಮೊದಲಾದವರಿದ್ದರು. ಶಿಕ್ಷಕಿ ಡಿ.ಎಂ.ಮಹದೇವಿ ನಿರೂಪಿಸಿದರು. ಬಸವರಾಜು ಸ್ವಾಗತಿಸಿದರು. ಕೆ.ಎಸ್.ಮೂರ್ತಿ ವಂದಿಸಿದರು.