ಕುಶಾಲನಗರ : ತಾಲ್ಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ. ಪಂಚ ಗ್ಯಾರಂಟಿ ಯೋಜನೆಗಳು‌ ಫಲಾನುಭವಿಗಳಿಗೆ ದೊರೆಯುವಲ್ಲಿ ಅಧಿಕಾರಿಗಳು ಶ್ರಮವಹಿಸಬೇಕು; ವಿಪಿ ಶಶಿಧರ್

ಕುಶಾಲನಗರ : ತಾಲ್ಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ. ಪಂಚ ಗ್ಯಾರಂಟಿ ಯೋಜನೆಗಳು‌ ಫಲಾನುಭವಿಗಳಿಗೆ ದೊರೆಯುವಲ್ಲಿ ಅಧಿಕಾರಿಗಳು ಶ್ರಮವಹಿಸಬೇಕು; ವಿಪಿ ಶಶಿಧರ್

ಕುಶಾಲನಗರ : ರಾಜ್ಯ ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಅಧ್ಯಕ್ಷತೆಯಲ್ಲಿ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. ಮೊದಲಿಗೆ ಹಿಂದಿನ ಸಭೆಯ ಅನುಪಾಲನಾ ವರದಿ‌ ಬಗ್ಗೆ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು.

 ಗ್ಯಾರೆಂಟಿ ಯೋಜನೆಗಳು ಎಲ್ಲಾ ಫಲಾನುಭವಿಗಳಿಗೆ ದೊರೆಯುವಲ್ಲಿ ಅಧಿಕಾರಿಗಳು ಶ್ರಮವಹಿಸಬೇಕು ಎಂದು ವಿ.ಪಿ.ಶಶಿಧರ್ ಸೂಚಿಸಿದರು. ಸಭೆಗೆ ಪಾಲ್ಗೊಳ್ಳದೆ ಸಿಬ್ಬಂದಿ ಕಳುಹಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲ್ಲೂಕು ಮಟ್ಟದ ಅಧಿಕಾರಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ಶಶಿಧರ್, ಸಮರ್ಪಕ ಮಾಹಿತಿ‌ ಇಲ್ಲದ ಸಿಬ್ಬಂದಿಗಳನ್ನು ಸಭೆಗೆ ಕಳುಹಿಸುವ ಪರಿಪಾಠದ ಸರಿಯಾದ ಕ್ರಮವಲ್ಲ ಎಂದು ಹರಿಹಾಯ್ದರು.

ಸಭೆಗೆ ಸತತವಾಗಿ ಗೈರಾಗುತ್ತಿರುವ ಅಧಿಕಾರಿ ಶ್ರೀದೇವಿ ವಿರುದ್ದ ಸೂಕ್ತ ಕ್ರಮಕ್ಕೆ‌ ಮೇಲಾಧಿಕಾರಿಗಳಿಗೆ ಪತ್ರ ಬರೆಯಲು ತೀರ್ಮಾನಿಸಲಾಯಿತು. ಶಕ್ತಿ ಯೋಜನೆ ಹಾಗೂ ಅದಕ್ಕೆ ಸಂಬಂಧಿಸಿದಂತೆ ಬಸವನಹಳ್ಳಿಯಲ್ಲಿ ನೂತನ ಡಿಪೋ‌ ನಿರ್ಮಾಣ ಕಾಮಗಾರಿ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು. ಕೂಡ್ಲೂರು ಕೈಗಾರಿಕಾ ಘಟಕದ‌ ಕಾರ್ಮಿಕರಿಗೆ ಶಕ್ತಿ ಯೋಜನೆ ಸೌಲಭ್ಯ ದೊರೆಯದಿರುವ ಬಗ್ಗೆ ವಿ.ಪಿ.ಶಶಿಧರ್ ವಿಷಯ ಪ್ರಸ್ತಾಪಿಸಿ ಬೆಳಗ್ಗೆ ಮತ್ತು ಸಂಜೆ ಮಡಿಕೇರಿ ಡಿಪೋ ಬಸ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಸಂಚಾರಿ ನಿಯಂತ್ರಣಾಧಿಕಾರಿಗೆ ಸೂಚಿಸಿದರು.

ಹೆಬ್ಬಾಲೆ, ಶಿರಂಗಾಲ ಭಾಗದಿಂದ ಬರುವ ಕೂಲಿ‌ ಕಾರ್ಮಿಕರಿಗೆ ಸಾರಿಗೆ ಬಸ್ ಸೌಲಭ್ಯ ದೊರಕದೆ ಖಾಸಗಿ ವಾಹನಗಳಿಗೆ‌ ಹೆಚ್ಚುವರಿ ಹಣ ನೀಡಿ ಕೆಲಸಕ್ಕೆ‌ ಬರುವ ಪರಿಸ್ಥಿತಿ ಇರುವ ಬಗ್ಗೆ ಸದಸ್ಯ ಕೆ.ಎಸ್.ಕೃಷ್ಣೇಗೌಡ ಗಮನ ಸೆಳೆದರು. ಪಡಿತರ ಚೀಟಿ ರದ್ದತಿ, ಹೊಸ‌ ಬಿಪಿಎಲ್ ಕಾರ್ಡ್ ವಿತರಣೆ ಬಗ್ಗೆ ಆಹಾರ ನಿರೀಕ್ಷಕರಿಂದ ಮಾಹಿತಿ ಪಡೆಯಲಾಯಿತು. ಈಗಾಗಲೆ ಬಿಪಿಎಲ್ ನಿಂದ‌ ಎಪಿಎಲ್ ಗೆ ವರ್ಗವಾವಣೆಗೊಂಡ‌ ಪಡಿತರ ಚೀಟಿ ಪರಿಶೀಲನೆಗೆ ಅವಕಾಶ ಕಲ್ಪಿಸಿದ್ದು ಅರ್ಹ‌ ಫಲಾನುಭವಿಗಳು ತಹಸೀಲ್ದಾರ್ ಗೆ ಅರ್ಜಿ‌ ಸಲ್ಲಿಸುವಂತೆ ಸಭೆಯ ಮೂಲಕ ವಿ.ಪಿ.ಶಶಿಧರ್ ಕೋರಿದರು.

ಬಿಪಿಎಲ್ ಪಡಿತರ ಚೀಟಿ ಪಡೆದುಕೊಳ್ಳಲು ಇದ್ದ ನಿಯಮಗಳ ಸಡಿಲಿಕೆ‌ ಬಗ್ಗೆ ಚರ್ಚೆ ನಡೆಯುತ್ತಿದೆ. ಮೆಡಿಕಲ್ ಎಮರ್ಜೆನ್ಸಿ ಗೆ ಬಿಪಿಎಲ್‌ ಕಾರ್ಡ್ ಒದಗಿಸುವ ಅವಕಾಶವಿದೆ ಎಂದು ಅವರು ತಿಳಿಸಿದರು.ಉಳಿದಂತೆ ಯುವನಿಧಿ, ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.

 ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್, ಜಿಲ್ಲಾ ಸಮಿತಿ ಉಪಾಧ್ಯಕ್ಷ ಕೆ.ಸಿ.ಶಶಿಭೀಮಯ್ಯ, ಸದಸ್ಯರಾದ ಕೆ.ಎಸ್.ಕೃಷ್ಣೇಗೌಡ, ವಿವೇಕಾನಂದ ಎಸ್.ಎಸ್, ಶ್ರೀನಿವಾಸ್ ಕುಮಾರ್ ಎನ್, ಆದಂ ಎಂ.ಎ, ಶ್ರೀನಿವಾಸ್ ಎಸ್, ಮಲ್ಲಿಕಾರ್ಜುನ ಬಿ.ಸಿ, ಕಿಶೋರ್ ಯು.ಎಂ, ರಫೀಕ್ ಖಾನ್,ರಾಜಶೇಖರ, ಫಿಲೋಮಿನ ಪಾಲ್ಗೊಂಡಿದ್ದರು.

  ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಿದ ಇಬ್ಬರು ವಿಧವೆ ಮಹಿಳೆಯರ ಅರ್ಜಿ‌ ಕಾಣೆಯಾದ ಪ್ರಕರಣದ ನಡೆದಿದ್ದು,ಇದು ಸಂಶಯ ಎಡೆಮಾಡಿಕೊಟ್ಟಿದೆ.ಪ್ರಥಮ‌ ಪ್ರಾಶಸ್ತ್ಯ‌ ನೀಡಬೇಕಾದ ಅರ್ಜಿ ಬದಿಗೊತ್ತಿ ಆಮಿಷಕ್ಕೆ‌ ಒಳಗಾಗಿರುವ ಬಗ್ಗೆ ಸಂಶಯ ಮೂಡುತ್ತಿದೆ ಎಂದು ಅಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸದ್ಯದಲ್ಲೇ ಶಾಸಕರ ಸಮ್ಮುಖದಲ್ಲಿ ನಡೆಯುವ ಕೆಡಿಪಿ ಸಭೆಯಲ್ಲಿ ಹಿರಿಯ ಅಧಿಕಾರಿ ಪಾಲ್ಗೊಂಡು ಸೂಕ್ತ ಉತ್ತರ ನೀಡಬೇಕು ಎಂದು ಶಶಿಧರ್ ಸೂಚಿಸಿದರು.

ಉದ್ದಿಮೆ ಆರಂಭಿಸಲು ಸಾಲ‌ಸೌಲಭ್ಯ ಯೋಜನೆಗೆ ಫಲಾನುಭವಿಗಳ‌ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಪಂಚ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ತಾಲ್ಲೂಕು ಅಧ್ಯಕ್ಷ ವಿ.ಪಿ.ಶಶಿಧರ್ ಅಧ್ಯಕ್ಷತೆಯಲ್ಲಿ ನಡೆಯಿತು.