ಧರ್ಮ ಭೇದವಿಲ್ಲದೆ ಸಮಾಜ ನಿರ್ಮಾಣವಾಗಲಿ -ಚೆರಿಯಪರಂಬು ಮಖಾಂ ಉರೂಸ್ ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಅಭಿಮತ

Feb 9, 2026 - 11:02
 0  221
ಧರ್ಮ ಭೇದವಿಲ್ಲದೆ ಸಮಾಜ ನಿರ್ಮಾಣವಾಗಲಿ -ಚೆರಿಯಪರಂಬು ಮಖಾಂ ಉರೂಸ್ ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಅಭಿಮತ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ಧರ್ಮಭೇದವಿಲ್ಲದೆ ನಾವೆಲ್ಲರೂ ಒಂದೇ ಎನ್ನುವ ಮನೋಭಾವದಿಂದ ಸಮಾಜ ನಿರ್ಮಾಣವಾಗಲು ನಾವೆಲ್ಲರೂ ಶ್ರಮಿಸಬೇಕೆಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಹೇಳಿದರು.

 ಇತಿಹಾಸ ಪ್ರಸಿದ್ಧ ನಾಪೋಕ್ಲು ಬಳಿಯ ಚೆರಿಯಪರಂಬು ಮಖಾಂ ಉರೂಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶಾಸಕರು ಪರಸ್ಪರ ಸುಖ,ಶಾಂತಿ, ಸಹಬಾಳ್ವೆಯೊಂದಿಗೆ ನಾವೆಲ್ಲರೂ ದ್ವೇಷ ಮುಕ್ತವಾದ ಸಮಾಜದಲ್ಲಿ ಬದುಕಬೇಕೆಂಬುದು ನನ್ನ ಆಶಯವಾಗಿದ್ದು ಅದಕ್ಕಾಗಿ ನಾವೆಲ್ಲರೂ ಶ್ರಮಿಸಬೇಕು ಎಂದು ನುಡಿದರು.

 ಊರಿನ ಜನರ ಏಳಿಗೆಗಾಗಿ ಎಲ್ಲರೂ ಉರೂಸ್ ಮೂಲಕ ಪ್ರಾರ್ಥನೆಯನ್ನು ಸಲ್ಲಿಸುತ್ತೀರಿ. ಇಂತಹ ಧಾರ್ಮಿಕ ಕಾರ್ಯಕ್ರಮ ಆಯೋಜನೆಯಿಂದ ಸಮಾಜದಲ್ಲಿ ಪರಸ್ಪರ ಬಾಂಧವ್ಯವೃದ್ಧಿಯಾಗಲಿದೆ. ನಾನು ಕೂಡ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತೇನೆ. ಮುಂದಿನ ವರ್ಷ ಊರೂಸಿನ ಕೊನೆಯ ದಿನದಲ್ಲಿ ನಿಮ್ಮೊಂದಿಗೆ ಕಳೆಯಲು ಇಚ್ಚಿಸುತ್ತೇನೆ ಎಂದ ಅವರು ಹೆಚ್ಚಿನ ಸಂಖ್ಯೆಯಲ್ಲಿ ಉರೂಸಿಗೆ ಭಕ್ತಾದಿಗಳು ಆಗಮಿಸುವುದರಿಂದ ಯಾವುದೇ ಅಡಚಣೆ ಉಂಟಾಗದೆ ಯಶಸ್ವಿಯಾಗಿ ಕಾರ್ಯಕ್ರಮ ನಡೆಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಚೆರಿಯಪರಂಬು ಜಮಾಅತ್ ವತಿಯಿಂದ ಶಾಸಕ ಪೊನ್ನಣ್ಣ, ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ಸೂರಜ್ ಹಾಗೂ ಪರವಂಡ ಸಿರಾಜ್ ಅವರನ್ನು ಶಾಲುಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

 ಚೆರಿಯಪರಂಬು ಜಮಾಅತ್ ಅಧ್ಯಕ್ಷ ಪಿ.ಎ.ಅಹಮದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ, ಜಮಾಅತ್ ಪ್ರಧಾನ ಕಾರ್ಯದರ್ಶಿ ಪರವಂಡ ಸಿರಾಜ್, ಉಪಾಧ್ಯಕ್ಷ ಪಿ. ಎಂ. ಇಬ್ರಾಹಿಂ, ಕೋಶಾಧಿಕಾರಿ ಪಿ. ಎಚ್. ಬಶೀರ್, ಸಹ ಕಾರ್ಯದರ್ಶಿ ಆಲಿ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅನೀಫ್ ಚೋಕಂಡಳ್ಳಿ, ಡಿಸಿಸಿ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಲೀಂ ಹಾರಿಸ್, ಸದಸ್ಯರಾದ ಮಾಚೆಟ್ಟಿರ ಕುಶು ಕುಶಾಲಪ್ಪ, ಇಸ್ಮಾಯಿಲ್, ಹಳೇ ತಾಲೂಕು ಜಮಾಅತ್ ಅಧ್ಯಕ್ಷ ಟಿ. ಎ.ಮೊಹಮ್ಮದ್, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಟಿ. ಎ. ಮೊಹಮ್ಮದ್ ಅನೀಫ್, ನಾಪೋಕ್ಲು ಮದೀನಾ ಮಸೀದಿಯ ಅಧ್ಯಕ್ಷ ವಾಸಿಂ ಕ್ಲಾಸಿಕ್,ಕೋಳುಮಂಡ ರಫೀಕ್, ಚೆರಿಯಪರಂಬು ಜಮಾಅತ್ ಖತೀಬರಾದ ಮೊಹಮ್ಮದ್ ಶಫೀಕ್ ಅಲಿ ಸಿರಾಜಿ, ಜಮಾಅತ್ ಆಡಳಿತ ಮಂಡಳಿ ಪದಾಧಿಕಾರಿಗಳಾದ ಅಶ್ರಫ್,ಮೊಯ್ದುಕುಂಞಿ ಸೇರಿದಂತೆ ಮತ್ತಿತರ ಪ್ರಮುಖರು, ಗ್ರಾಮಸ್ಥರು ಹಾಜರಿದ್ದರು.

ಚೆರಿಯಪರಂಬು ಜಮಾಅತ್ ಮಾಜಿ ಕಾರ್ಯದರ್ಶಿ ಸಿ.ಎಂ. ಉಸ್ಮಾನ್ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಪರವಂಡ ಸಿರಾಜ್ ಸ್ವಾಗತಿಸಿ, ಸರ್ವರನ್ನು ವಂದಿಸಿದರು.

 ಉರೂಸ್ ಕಾರ್ಯಕ್ರಮದ ಅಂಗವಾಗಿ ರಿಫಾಹಿ ದಫ್ ಸಂಘ ಹಾಗೂ ವಿದ್ಯಾರ್ಥಿಗಳಿಂದ ನಡೆದ ದಫ್ ಪ್ರದರ್ಶನ ಮತ್ತು ಝುಬೈರ್ ತೋಟ್ಟಿಕಲ್ ಸಂಗಡಿಗರ ಕಥಾ ಪ್ರಸಂಗ ನೋಡುಗರ ಗಮನ ಸೆಳೆಯಿತು.ಉರೂಸ್ ಕಾರ್ಯಕ್ರಮವು ಫೆ.10ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ಫೆ.9ರ ಸೋಮವಾರ ಸಂಜೆ 4ಗಂಟೆಗೆ ಮಸೀದಿಯಲ್ಲಿ ಮೌಲೂದ್ ಪಾರಾಯಣ ಹಾಗೂ ಭಕ್ತಾಧಿಗಳಿಗೆ ಅನ್ನದಾನ ಕಾರ್ಯಕ್ರಮ ನಡೆಯಲಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0