ಪ್ರೇಮ ವಿವಾಹದ ವೈಷಮ್ಯ: ವರನ ಅಣ್ಣನ ಮೂಗು ಕತ್ತರಿಸಿದ ವಧುವಿನ ಕುಟುಂಬಸ್ಥರು!
ಬಾರ್ಮರ್ (ರಾಜಸ್ಥಾನ), ಡಿ.19: ಪ್ರೇಮ ವಿವಾಹದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ನಡೆದ ದೀರ್ಘಕಾಲದ ವೈಷಮ್ಯ ಭೀಕರ ಹಿಂಸಾಚಾರಕ್ಕೆ ತಿರುಗಿರುವ ಘಟನೆ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ವರನ ಅಣ್ಣನ ಮೂಗನ್ನು ಹುಡುಗಿಯ ಕುಟುಂಬದವರು ಹರಿತವಾದ ಆಯುಧದಿಂದ ಕತ್ತರಿಸಿರುವುದು ಬೆಳಕಿಗೆ ಬಂದಿದೆ. ಬಳಿಕ ನಡೆದ ಪ್ರತೀಕಾರದ ಹಲ್ಲೆಯಲ್ಲಿ ಹುಡುಗಿಯ ಚಿಕ್ಕಪ್ಪನಿಗೆ ಗಂಭೀರ ಗಾಯಗಳಾಗಿವೆ.
ಅದೇ ಗ್ರಾಮದ 25 ವರ್ಷದ ಶ್ರವಣ್ ಸಿಂಗ್ ಮತ್ತು ಯುವತಿಯ ನಡುವಿನ ಪ್ರೇಮ ವಿವಾಹಕ್ಕೆ ಯುವತಿಯ ಕುಟುಂಬ ಒಪ್ಪಿಗೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮದುವೆಯ ನಂತರವೂ ಎರಡೂ ಕುಟುಂಬಗಳ ನಡುವೆ ಉದ್ವಿಗ್ನತೆ ಮುಂದುವರಿದಿತ್ತು. ಶ್ರವಣ್ ಸಿಂಗ್ ಪ್ರಸ್ತುತ ತನ್ನ ಪತ್ನಿ ಮತ್ತು ಕುಟುಂಬದೊಂದಿಗೆ ಗುಜರಾತ್ ನಲ್ಲಿ ವಾಸವಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಮಾಹಿತಿ ಪ್ರಕಾರ, ಶ್ರವಣ್ ಸಿಂಗ್ ಅವರ ಅಣ್ಣ ಯುಕೆ ಸಿಂಗ್ (35) ಹೊಲದಿಂದ ಮನೆಗೆ ಹಿಂತಿರುಗುತ್ತಿದ್ದಾಗ, ಯುವತಿಯ ಚಿಕ್ಕಪ್ಪ ಧರ್ಮ್ ಸಿಂಗ್ (50) ಹಾಗೂ ಅವರ ಸಹಚರರು ದಾಳಿ ನಡೆಸಿದ್ದಾರೆ. ಈ ವೇಳೆ ಯುಕೆ ಸಿಂಗ್ ಅವರ ಮೂಗನ್ನು ಹರಿತವಾದ ಆಯುಧದಿಂದ ಕತ್ತರಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಯುಕೆ ಸಿಂಗ್ ಹೇಗೋ ಮನೆ ತಲುಪಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.
ಈ ಘಟನೆಗೆ ಪ್ರತೀಕಾರವಾಗಿ ಯುಕೆ ಸಿಂಗ್ ಅವರ ಸಂಬಂಧಿಕರು ಯುವತಿಯ ಮನೆಗೆ ತೆರಳಿ ಧರ್ಮ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ದಾಳಿಯಲ್ಲಿ ಧರ್ಮ್ ಸಿಂಗ್ ಅವರ ಕಾಲು ಮುರಿದಿದ್ದು, ಅವರ ಸ್ಥಿತಿಯೂ ಗಂಭೀರವಾಗಿದೆ.
ಗಾಯಾಳುಗಳನ್ನು ಗುಡಮಲನಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯುಕೆ ಸಿಂಗ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಂಚೋರ್‌ಗೆ ಕರೆದೊಯ್ಯಲಾಗಿದೆ. ಧರ್ಮ್ ಸಿಂಗ್ ಅವರನ್ನು ಜೋಧ್‌ಪುರ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯ ಮಾಹಿತಿ ಪಡೆದ ಗುಡಮಲನಿ ಪೊಲೀಸ್ ಠಾಣೆಯ ಡಿಎಸ್ಪಿ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡೂ ಕಡೆಯವರ ದೂರುಗಳ ಆಧಾರದಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಿ ತನಿಖೆ ಮುಂದುವರಿಸಿದ್ದಾರೆ.
What's Your Reaction?
Like
1
Dislike
0
Love
0
Funny
1
Angry
0
Sad
0
Wow
1
