State News

97ನೇ ಮನೆಕಳ್ಳತನದ ವೇಳೆ ಕೈಕೊಟ್ಟ ನಸೀಬು! ಸಿಕ್ಕಿಬಿದ್ದ ಕುಖ್ಯಾತ ಕಳ್ಳ

admincoorgdaily

97ನೇ ಮನೆಕಳ್ಳತನದ ವೇಳೆ ಕೈಕೊಟ್ಟ ನಸೀಬು! ಸಿಕ್ಕಿಬಿದ್ದ ಕುಖ್ಯಾತ ಕಳ್ಳ

ಚಿಕ್ಕಬಳ್ಳಾಪುರ, ಡಿ. 17: ಮನೆಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ ಕುಖ್ಯಾತ ಕಳ್ಳನೊಬ್ಬ 97ನೇ ಬಾರಿ ಕಳ್ಳತನ ನಡೆಸುವ ವೇಳೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಬಂಧಿತನನ್ನು ರಾಹುಲ್ ಕುಮಾರ್ ಶರ್ಮಾ ಅಲಿಯಾಸ್ ಭರತ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತ ಮೂಲತಃ ತೆಲಂಗಾಣದ ಹೈದರಾಬಾದ್ ನಿವಾಸಿ. 14ನೇ ವಯಸ್ಸಿನಲ್ಲೇ ಮನೆಕಳ್ಳತನಕ್ಕೆ ಇಳಿದಿದ್ದ ರಾಹುಲ್, ಇದೀಗ 38 ವರ್ಷ ವಯಸ್ಸಿನವನಾಗಿದ್ದು, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಇದುವರೆಗೆ 96 ಮನೆಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕವೂ ಆರೋಪಿಯು ತನ್ನ ಅಪರಾಧ ಚಟವನ್ನು ಮುಂದುವರಿಸಿದ್ದಾನೆ ಎನ್ನಲಾಗಿದೆ. ನ. 27ರಂದು ಚಿಕ್ಕಬಳ್ಳಾಪುರ ತಾಲೂಕಿನ ಅಣಕನೂರು ಗ್ರಾಮದಲ್ಲಿ ನಾಗರಾಜ್ ಎ.ಎಂ. ಎಂಬುವರ ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕದ್ದುಕೊಂಡು ಪರಾರಿಯಾಗಿದ್ದ ಪ್ರಕರಣ ಸಂಬಂಧ ತಡವಾಗಿ ದೂರು ದಾಖಲಾಗಿತ್ತು.

ದೂರು ದಾಖಲಿಸಿಕೊಂಡ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆಯಲ್ಲಿ ಆರೋಪಿಗೆ ಅಲ್ಲಾ ಭಕ್ಷ್ ಎಂಬ ಸ್ನೇಹಿತ ಹಾಗೂ ಆಂಧ್ರಪ್ರದೇಶದ ಸೈಯದ್ ದಾವೂದ್ ಸಹಕಾರ ನೀಡಿದ್ದದ್ದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮೂವರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.