ಮದೆನಾಡು :ಬೈಕ್ ಸವಾರನ ಮೇಲೆ ಕಾಡಾನೆ ದಾಳಿ
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ಕಾಡಾನೆ ಹಿಂಡು ದಾಳಿ ನಡೆಸಿ ಬೈಕ್ ಸವಾರನೊಬ್ಬ ಗಾಯಗೊಂಡು ಜೀವಪಾಯದಿಂದ ಪಾರಾಗಿ ಆಸ್ಪತ್ರೆ ಸೇರಿದ ಘಟನೆ ಮದೆನಾಡಿನಲ್ಲಿ ಭಾನುವಾರ ಸಂಜೆ ನಡೆದಿದೆ. ಮದೆ ನಾಡು ಗ್ರಾಮದ ನಿವಾಸಿ ದಿವಂಗತ ಪಟ್ಟಡ ಅಯ್ಯಪ್ಪ ಎಂಬವರ ಪುತ್ರ ಭರತ್ ಕುಮಾರ್ (50) ಕಾಡಾನೆ ದಾಳಿಗೆ ಒಳಗಾದಸವಾರನಾಗಿದ್ದಾರೆ.
ರೆಸಾರ್ಟ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಭರತ್ ಕುಮಾರ್ ಎಂದಿನಂತೆ ತಮ್ಮ ಬೈಕಿನಲ್ಲಿ ಮದನಾಡು - ಬೆಟ್ಟತ್ತೂರು ಮಾರ್ಗದ ರಸ್ತೆಯಲ್ಲಿ ಸಂಚರಿಸುತ್ತಿರುವ ಸಂದರ್ಭ ಸಾಲಪು ಎಂಬಲ್ಲಿ ರಸ್ತೆಯ ಮಧ್ಯೆ ದಿಢೀರನೆ ಏಕಾಏಕಿ ಪ್ರತ್ಯಕ್ಷವಾದ ಕಾಡಾನೆಗಳ ಹಿಂಡು ಭರತ್ ಮೇಲೆ ದಾಳಿ ಮಾಡಿ ಸೊಂಡಿಲಿನಲ್ಲಿ ಎಸೆದ ಪರಿಣಾಮ ಕಾಲು ಮುರಿತಗೊಂಡು, ತಲೆಗೂ ಗಾಯಗಳಾಗಿದ್ದು ಬೈಕ್ ಜಕಮ್ ಗೊಂಡಿದೆ.
ಈ ಸಂದರ್ಭ ಸಮೀಪದ ಮನೆಯವರು ಬೊಬ್ಬೆ ಕೇಳಿ ಸ್ಥಳಕ್ಕೆ ತೆರಳಿ ವಿಷಯ ತಿಳಿದ ಬಳಿಕ ಗ್ರಾಮ ಪಂಚಾಯತಿ ಸದಸ್ಯ ಬಿ. ಸಿ ಸಜನ್ ವೈನೆರವನ ಪರಶುರಾಮ ಗಾಯಗೊಂಡಿರುವ ಭರತ್ ಕುಮಾರ್ ಅವರನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮದೆನಾಡು ಗ್ರಾಮದಲ್ಲಿ ನಿರಂತರವಾಗಿ ಆನೆ ಹಾವಳಿ ಮುಂದುವರೆದಿದ್ದು ಈ ಘಟನೆ ಗ್ರಾಮಸ್ಥರಲ್ಲಿ ತೀವ್ರ ಆತಂಕವ ಮೂಡಿಸಿದ್ದು, ಈಗಾಗಲೇ ಆನೆಗಳಿಂದ ಅಪಾರ ಕೃಷಿ ನಷ್ಟ ಹೊಂದಿರುವ ಜನರು ಈಗ ಜೀವ ಉಳಿಸಿಕೊಳ್ಳಲು ಪರದಾಡುವ ಸ್ಥಿತಿ ಬಂದಿದೆ. ಇನ್ನಾದರೂ ಅರಣ್ಯ ಇಲಾಖೆ ಮತ್ತು ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಂಡು ಆನೆಗಳನ್ನು ಶಾಶ್ವತ ವಾಗಿ ಕಾಡಿಗಟ್ಟುವ ಅಥವಾ ಹಿಡಿದು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.