ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಮಡಿಕೇರಿ ನಗರ ಕಾಂಗ್ರೆಸ್ ಪ್ರತಿಭಟನೆ

Mar 23, 2026 - 14:24
Mar 23, 2026 - 14:31
 0  418
ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಮಡಿಕೇರಿ ನಗರ ಕಾಂಗ್ರೆಸ್ ಪ್ರತಿಭಟನೆ

ಮಡಿಕೇರಿ; ಕೇಂದ್ರ ಸರ್ಕಾರ ಏಕಾಏಕಿ ಗೃಹಬಳಕೆ ಮತ್ತು ವಾಣಿಜ್ಯ ಅಡುಗೆ ಅನಿಲ ಬೆಲೆ ಏರಿಕೆ ಮಾಡಿದನ್ನು ವಿರೋಧಿಸಿ ಮಡಿಕೇರಿ ನಗರ ಕಾಂಗ್ರೆಸ್ ಕಾರ್ಯಕರ್ತರು ಇಂದು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ನಗರದ ಇಂದಿರಾ ಗಾಂಧಿ ( ಚೌಕಿ) ವೃತ್ತದಿಂದ ಮೆರವಣಿಗೆ ಮೂಲಕ ಸಾಗಿದ ನೂರಾರು ಕಾರ್ಯಕರ್ತರು ಗ್ಯಾಸ್ ಬೆಲೆ ಏರಿಕೆ ಮಾಡಿದ ಕೇಂದ್ರ ಸರ್ಕಾರ,ಬಿಜೆಪಿ ಆಡಳಿತ,ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲ ಸೀತಾರಾಮ್ ವಿರುದ್ದ ಧಿಕ್ಕಾರ ಕೂಗಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನಾ ಸಭೆ ನಡೆಸಿದರು.

 ನಗರ ಕಾಂಗ್ರೆಸ್ ಪ್ರಕಾಶ್ ಆಚಾರ್ಯ ಮಾತನಾಡಿ ಗ್ಯಾಸ್ ಬೆಲೆ ಏರಿಸುವ ಮೂಲಕ ಕೇಂದ್ರ ಸರ್ಕಾರ ಜನವಿರೋಧಿ ಆಡಳಿತ ನಡೆಸುತ್ತಿದೆ ಎಂದು ಟೀಕಿಸಿದರು. ಗ್ಯಾಸ್ ಬೆಲೆ ಇಳಿಸುವವರೆಗೆ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಪ್ರಚಾರ ಸಮಿತಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಮಾತನಾಡಿ ಮನ್ ಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 430 ಇದ್ದ ಗ್ಯಾಸ್ ಬೆಲೆ ಇಂದು ಸಾವಿರದ ಸನಿಹಕ್ಕೆ ತಲುಪಿದ್ದು ಇದು ನರೇಂದ್ರ ಮೋದಿಯವರ ಆಡಳಿತದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಆ ಸಮಯದಲ್ಲಿ 450 ರೂ ಆಗಿದೆ ಎಂದು ಬಿಜೆಪಿ ಪ್ರತಿಭಟನೆ ನಡೆಸಿದ್ದರು. ಈಗ ಸಾವಿರ ರೂ ಆದರೂ ತುಟಿಬಿಚ್ಚುತ್ತಿಲ್ಲ ಎಂದು ವ್ಯಂಗ್ಯ ಮಾಡಿದರು.

 ಕೇಂದ್ರ ಸರ್ಕಾರದ ಜನವಿರೋಧಿ ಆಡಳಿತದ ಬಗ್ಗೆ ನಿರಂತರವಾಗಿ ಹೋರಾಟ ನಡೆಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಮೂಡಾ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ ಮಾತನಾಡಿ ಬಿಜೆಪಿ ಯವರು ಸುಳ್ಳುಗಳನ್ನು ಜನರಿಗೆ ಹೇಳುತ್ತಾ ರಾಜಕಾರಣ ಮಾಡುತ್ತಿದ್ದಾರೆ. ಸ್ಥಳೀಯ ಶಾಸಕರು ಉತ್ತಮ ಕೆಲಸ ಮಾಡುತ್ತಿದ್ದರೂ ವಿನಾ ಕಾರಣ ಟೀಕೆ ಮಾಡುತ್ತಾರೆ ಎಂದು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ತೆನ್ನಿರ ಮೈನಾ ಮಾತನಾಡಿ ಗ್ಯಾಸ್ ಬೆಲೆ ಏರಿಕೆ ಮಾಡಿ ಕೊಲ್ಲಿ‌ರಾಷ್ಟ್ರದಲ್ಲಿ ನಡೆಯುತ್ತಿರುವ ಯುದ್ದದ ನೆಪ ಹೇಳುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ.ಹಿಂದೆ 2003 ರಿಂದ 2011 ರವರೆಗೆ ಅಮೇರಿಕಾ ಮತ್ತು ಇರಾಕ್ ನಡುವೆ ಯುದ್ದ ನಡೆದಿತ್ತು.ಆಗಲೂ ಇದೇ ಪರಿಸ್ಥಿತಿ ಇತ್ತು.

ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯು.ಪಿ.ಎ ಸರ್ಕಾರ ಜಾಣ್ಮೆ ಮತ್ತು ಕೌಶಲ್ಯಪೂರ್ಣ ಆಡಳಿತ ಮೂಲಕ ಯುದ್ದದ ಬಿಸಿ ದೇಶದ ಜನತೆಗೆ ತಟ್ಟದ ಹಾಗೆ ಎಚ್ಚರವಹಿಸಿದ್ದರು. ಪೆಟ್ರೋಲ್ ಬೆಲೆ ಲೀಟರಿಗೆ 65 ರೂ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆ 450 ರೂಗಳ ಆಸುಪಾಸಿನಲ್ಲಿ ಇರುವಂತೆ ಮಾಡಿ ದೇಶದ ನಾಗರೀಕರ ಹಿತ ಕಾಪಾಡಿದ್ದರು. ಆದರೆ ಈಗ ಮೋದಿ ನೇತೃತ್ವದ ಕೇಂದ್ರದ ಎನ್.ಡಿ.ಎ ಸರ್ಕಾರ ಯಾವುದೇ ಆಡಳಿತಾತ್ಮಕ ಪ್ರಯತ್ನ ಮಾಡದೆ ಜನರ ಮೇಲೆ ಬೆಲೆ ಏರಿಕೆಯ ಬರೆ ಹೊರೆಸಿ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 ಅಪರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಐಶ್ವರ್ಯ ರವರ ಮೂಲಕ ತಕ್ಷಣವೇ ಗ್ಯಾಸ್ ದರ ಇಳಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ನೀಡಿದರು.

 ಮಹಿಳಾ ಕಾಂಗ್ರೆಸ್ ನಗರಾಧ್ಯಕ್ಷೆ ಶ್ರೀಮತಿ ಶಶಿ ಮಡಿಕೇರಿ ನಗರ ಸಭೆ ಸದಸ್ಯರಾದ ಮಂಡಿರ ಸದಾ ಮುದ್ದಪ್ಪ, ಜಿ.ಸಿ.ಜಗದೀಶ್, ಯಾಕುಬ್, ಜುಲೇಕಾಬಿ, ಸೇವಾದಳದ ಅಧ್ಯಕ್ಷರಾದ ಕಾನೆಹಿತ್ಲು ಮೊಣ್ಣಪ್ಪ,ಕಾರ್ಮಿಕ ಘಟಕದ ಅಧ್ಯಕ್ಷರಾದ ದಿನೇಶ್ ಪ್ರಮುಖರಾದ ಸುದಯ್ ನಾಣಯ್ಯ, ಕಲೀಲ್ ಬಾಷ,ಕೆ.ಜೆ.ಪೀಟರ್,ಜಾನ್ಸನ್ ಪಿಂಟೋ,ಮೀನಾಜ್ ಪ್ರವೀಣ್ ,ಆರ್.ಪಿ.ಚಂದ್ರಶೇಖರ್, ಫ್ಯಾನ್ಸಿ ಪಾರ್ವತಿ, ಮಮ್ತಾಜ್ ಬೇಗಂ,ಪ್ರೇಮಾ ಕೃಷ್ಣಪ್ಪ,ಪ್ರೇಮಾ ಲಿಂಗಪ್ಪ, ಕೋಚನ ಚೇತನ್,ಅರ್ಜುನ್,ಮುನೀರ್ ಮಾಚರ್, ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 1
Sad Sad 1
Wow Wow 0