ಮಡಿಕೇರಿ;ಕೊಡಗು ಗೌಡ ಯುವ ವೇದಿಕೆಯ ವತಿಯಿಂದ ಗೌಡ ಜನಾಂಗ ಬಾಂಧವರಿಗಾಗಿ ಮೇ1ರಿಂದ 16ರವರೆಗೆ ಕ್ರೀಡಾಕೂಟ

Apr 17, 2026 - 15:02
 0  140
ಮಡಿಕೇರಿ;ಕೊಡಗು ಗೌಡ ಯುವ ವೇದಿಕೆಯ ವತಿಯಿಂದ ಗೌಡ ಜನಾಂಗ ಬಾಂಧವರಿಗಾಗಿ ಮೇ1ರಿಂದ  16ರವರೆಗೆ ಕ್ರೀಡಾಕೂಟ

ಮಡಿಕೇರಿ: ಕೊಡಗು ಗೌಡ ಯುವ ವೇದಿಕೆಯ ವತಿಯಿಂದ ಗೌಡ ಜನಾಂಗ ಬಾಂಧವರಿಗಾಗಿ 27ನೇ ವರ್ಷದ ಕ್ರೀಡಾಕೂಟ ಕುಟುಂಬ 2026 ಇದೇ ಮೇ1ರಿಂದ 16ರ ವರೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕೊಡಗು ಗೌಡ ಯುವ ವೇದಿಕೆಯ ಕಾರ್ಯದರ್ಶಿ ಪುದಿಯನೆರವನ ರಿಶಿತ್ ಮಾದಯ್ಯ ತಿಳಿಸಿದರು.

2000ನೇ ಇಸವಿಯಲ್ಲಿ ಕೆದಂಬಾಡಿ ಕುಟುಂಬಸ್ಥರ ನೇತೃತ್ವದಲ್ಲಿ ಆರಂಭವಾದ ಗೌಡ ಜನಾಂಗದ ಕ್ರೀಡಾಕೂಟ ನಂತರದ ವರ್ಷಗಳಲ್ಲಿ ತುಮ್ತಜೆ ಗಣೇಶ್ ಅವರ ಸಾಂಸ್ಕೃತಿಕ ಅಕಾಡೆಮಿ ಆಶ್ರಯದಲ್ಲಿ ಸಾಗಿ ಬಂತು. ನಂತರ 2013ನೇ ಇಸವಿಯಿಂದ ಕೊಡಗು ಗೌಡ ಯುವ ವೇದಿಕೆ ಗೌಡ ಸಮುದಾಯಕ್ಕಾಗಿ ಈ ಕ್ರೀಡಾಕೂಟವನ್ನು ಮುಂದುವರಿಸುತ್ತಾ ಬಂದಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊಡಗು ಗೌಡ ಯುವ ವೇದಿಕೆಯ ನೂತನ ಸಮಿತಿ ಬಾಳಾಡಿ ಮನೋಜ್ ಅವರ ಅಧ್ಯಕ್ಷತೆಯಲ್ಲಿ ಜನಾಂಗದ ಮಹತ್ವಾಕಾಂಕ್ಷೆಯ ಗೌಡ ಒಲಿಂಪಿಕ್ಸ್ 2027ರ ತಯಾರಿಯ ಪೂರ್ವಭಾವಿಯಾಗಿ ಈ ಬಾರಿ 2026 ರ ಕ್ರೀಡಾಕೂಟ ನಡೆಯಲಿದೆ. ವಿಶೇಷವಾಗಿ ಮೇ 1ರಂದು ಗಾಳಿಬೀಡಿನಲ್ಲಿ ಕ್ರೀಡಾಕೂಟವನ್ನು ಉದ್ಘಾಟಿಸಲಾಗುವುದು, ನಂತರ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಗುವುದು. ಮೊದಲಿಗೆ ಒಲಿಂಪಿಕ್‌ನ ಸಾಂಪ್ರದಾಯಿಕ ಕ್ರೀಡೆಯಾದ ಕ್ರಾಸ್ ಕಂಟ್ರಿ ಮೂಲಕ ಈ ವರ್ಷದ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದೆ. ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಮಕ್ಕಳಿಗೆ 3 ಕಿ.ಮೀ ಓಟ, ಮಹಿಳೆಯರಿಗೆ 5 ಕಿ.ಮೀ ಓಟ ಹಾಗೂ ಪುರುಷರಿಗೆ 8 ಕಿಲೋ ಮೀಟರ್ ಓಟವನ್ನು ಹಮ್ಮಿಕೊಳ್ಳಲಾಗಿದೆ. ಎಂಟು ಕಿಲೋ ಮೀಟರ್ ಓಟದಲ್ಲಿ ಗಾಳಿಬೀಡಿನ ಗೌಡ ಸಮುದಾಯದ 8 ಐನ್‌ಮನೆಗಳಾದ ಕೋಚನ, ಪೂಜಾರಿರ, ಉಡುದೋಳಿ, ಕೋಳುಮುಡಿಯನ, ಕರ್ಕರನ, ಕೊಂಬಾರನ, ಯಾಲದಾಳು, ಅಚ್ಚಪಟ್ಟಿರ ಕುಟುಂಬದ ಐನ್‌ಮನೆಗಳ ಮೂಲಕ ಸಾಗುವಂತೆ ದಾರಿಯನ್ನು ಸಜ್ಜುಗೊಳಿಸಲಾಗಿದೆ. ನಂತರ ಗೌಡ ಜನಾಂಗದ ಸಾಂಪ್ರದಾಯಿಕ ಕ್ರೀಡೆಯಾದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ. ಮೇ.2ರಿಂದ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಕುಟುಂಬವಾರು ಸೂಪರ್ 9 ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಆರಂಭವಾಗಲಿದೆ ಎಂದು ವಿವರಿಸಿದರು.

ಮೇ7 ರಿಂದ ಗೌಡ ಜನಾಂಗದ ಪ್ರಪ್ರಥಮ ಹಾಕಿ ಪಂದ್ಯಾಟ ಕುಟುಂಬವಾರು ರಿಂಕ್ ಹಾಕಿ ಆರಂಭವಾಗಲಿದೆ. ಮೇ16 ರಂದು ಕೇರಂ ಪಂದ್ಯಾಟ ಕೂಡ ನಡೆಯಲಿದೆ. ಸಾಂಸ್ಕೃತಿಕ ಕಲರವಕ್ಕಾಗಿ ಒಂದು ಹೊಸ ಪ್ರಯತ್ನವಾಗಿ ಮಿಸ್ಟರ್ ಗೌಡ ಮತ್ತು ಮಿಸ್ ಗೌಡತಿ ಎಂಬ ಅದ್ಭುತ ಕಾರ್ಯಕ್ರಮವನ್ನು ಮೇ15 ಮತ್ತು 16 ರಂದು ಆಯೋಜಿಸಲಾಗುತ್ತಿದೆ. ಹೆಸರು ನೋಂದಾಯಿಸಲು 8105160547, 9008198955 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ವಿವರಿಸಿದರು.

ಕೊಡಗಿನ ಗೌಡ ಜನಾಂಗದ ಕ್ರೀಡಾಕೂಟಕ್ಕೆ ಕಳೆದ ಮೂರು ವರ್ಷಗಳಿಂದ ಸರ್ಕಾರದ ಅನುದಾನ ಬಂದಿರುವುದಿಲ್ಲ. ಇದು ನಮಗೆ ತುಂಬಾ ನೋವನ್ನುಂಟುಮಾಡಿದೆ. 2022ರಲ್ಲಿ ಕೊನೆಯದಾಗಿ ಗೌಡ ಜನಾಂಗದ ಕ್ರೀಡಾಕೂಟಕ್ಕೆ ಸರ್ಕಾರದಿಂದ ಅನುದಾನ ಬಂದಿರುತ್ತದೆ. ಆದರೆ ಕಳೆದ ಮೂರು ವರ್ಷಗಳಿಂದ ಸರ್ಕಾರದ ಅನುದಾನಕ್ಕಾಗಿ ಸತತ ಪ್ರಯತ್ನಪಟ್ಟರು ಯಾವುದೇ ಸ್ಪಂದನೆ ದೊರೆತ್ತಿಲ್ಲ. ಮುಂದಿನ ದಿನಗಳಲ್ಲಿ ಶಾಸಕರುಗಳ ಪ್ರಯತ್ನದಿಂದ ಅನುದಾನ ಬರುವುದೆಂಬ ಭರವಸೆಯಲ್ಲಿದ್ದೇವೆ ಎಂದರು.

ಕೊಡಗು ಗೌಡ ಯುವ ವೇದಿಕೆಯ ಉಪಾಧ್ಯಕ್ಷ ಎಡಿಕೇರಿ ಪ್ರಸನ್ನ ಮಾತನಾಡಿ, ಕಳೆದ 3 ವರ್ಷಗಳಿಂದ ಗೌಡ ಕ್ರೀಡಾಕೂಟದ ಅನುದಾನಕ್ಕಾಗಿ ಸರ್ಕಾರದ ಬಳಿ ಮನವಿ ಮಾಡಿಕೊಳ್ಳಲಾಗಿದೆ. ಆದರೆ, ಇಲ್ಲಿಯವರೆಗೆ ಅನುದಾನ ನೀಡಿಲ್ಲ, ಇನ್ನಾದರು ಶಾಸಕರು ಎಚ್ಚೆತ್ತುಕೊಂಡು ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಪರಿಚನ ಸತೀಶ್, ಕೋಶಾಧಿಕಾರಿ ದೇರಳ ನವೀನ್, ಕ್ರೀಡಾಧ್ಯಕ್ಷ ಕುಟ್ಟನ ಪ್ರಶಾಂತ್ ಹಾಗೂ ನಿರ್ದೇಶಕ ಕಲ್ಲುಮುಟ್ಲು ಅನುದೀಪ್ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0