ಮಡಿಕೇರಿ: ಹಣದ ವಿಚಾರಕ್ಕೆ ನಡೆದ ಗಲಾಟೆ; ಜಗಳ ಬಿಡಿಸಲು ಬಂದ ರೆಸಾರ್ಟ್ ಸಿಬ್ಬಂದಿಯ ಕೊಲೆ

Nov 11, 2025 - 08:18
 0  2.4k
ಮಡಿಕೇರಿ: ಹಣದ ವಿಚಾರಕ್ಕೆ ನಡೆದ ಗಲಾಟೆ; ಜಗಳ ಬಿಡಿಸಲು ಬಂದ ರೆಸಾರ್ಟ್ ಸಿಬ್ಬಂದಿಯ ಕೊಲೆ

ಜಗಳ ಬಿಡಿಸಲು ಬಂದ ವ್ಯಕ್ತಿಯ ಕೊಲೆ ಮಡಿಕೇರಿ: ಹಣದ ವಿಚಾರಕ್ಕೆ ನಡೆದ ಗಲಾಟೆಯನ್ನು ಬಿಡಿಸಲು ಬಂದ ಸಹಸಿಬ್ಬಂದಿಯನ್ನು ಚಾಕುವಿನಿಂದ ಇರಿದು ಕೊಲೆಗೈದ ಘಟನೆ 1 ಮೊಣ್ಣಂಗೇರಿಯಲ್ಲಿ ನಡೆದಿದ್ದು, ಪರಾರಿಯಾಗಿದ್ದ ಆರೋಪಿಯನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಖಾಸಗಿ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ದಿಲೀಪ್ ಶರ್ಮನನ್ನು ಕೊಲೆಗೈದ ದಯಾನಂದ್ ಪ್ರಸಾದ್‌ನನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

 ಘಟನೆಯ ಹಿನ್ನೆಲೆ:

ನ.7 ರೆಸಾರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ದಿಲೀಪ್ ಶರ್ಮ, ದಯಾನಂದ ಪ್ರಸಾದ್ ಹಾಗೂ ಸಂತೋಷ್ ಎಂಬವರು 1ನೇ ಮೊಣ್ಣಂಗೇರಿಯ ಮನೆಯೊಂದರಲ್ಲಿ ವಾಸವಿದ್ದರು. ರಾತ್ರಿ 8.30ಕ್ಕೆ ಸಂತೋಷ್ ಕುಮಾರ್ ರೂಮ್‌ ಗೆ ಹೋದ ದಯಾನಂದ್ ಹಣದ ವಿಚಾರದಲ್ಲಿ ಗಲಾಟೆ ಮಾಡಿದ್ದಾನೆ. ಈ ವೇಳೆ ದಿಲೀಪ್ ಶರ್ಮ ಮಧ್ಯಪ್ರವೇಶಿಸಿ ಜಗಳ ಬಿಡಿಸುವ ಪ್ರಯತ್ನ ನಡೆಸಿದ್ದಾರೆ.

ನಂತರ ದಯಾನಂದ್ ಪ್ರಸಾದ್ ಸಂತೋಷ್ ಕುಮಾರ್ ರೂಮ್‌ನಿಂದ ಗಾಜಿನ ಬಾಟಲಿ ತಂದು ಮೆಟ್ಟಿಲಿನಲ್ಲಿ ಒಡೆದು ಹಾಕಿದ್ದಾನೆ. ಗಲಾಟೆ ಅತಿರೇಕಕ್ಕೆ ಹೋದ ಸಂದರ್ಭ ದಿಲೀಪ್ ಶರ್ಮ ಘಟನೆಯನ್ನು ಮೊಬೈಲ್‌ನಲ್ಲಿ ವೀಡಿಯೋ ಸೆರೆಹಿಡಿದು ವ್ಯವಸ್ಥಾಪಕರಿಗೆ ತಿಳಿಸುವುದಾಗಿ ಎಚ್ಚರಿಸಿದ್ದು ಇದರಿಂದ ಗಲಾಟೆ ನಿಂತಿದೆ. ಸಂತೋಷ್ ಕುಮಾರ್ ಶೌಚಾಲಯಕ್ಕೆ ತೆರಳಿದ್ದ ಸಂದರ್ಭ ದಿಲೀಪ್ ಶರ್ಮ ಕಿರುಚುತ್ತಿರುವುದು ಕೇಳಿ ಬಂದಿದೆ.

ಹೋಗಿ ನೋಡಿದ ವೇಳೆ ಮುಖದ ಭಾಗದಲ್ಲಿ ಗಾಯವಾಗಿರುವುದು ಕಂಡಿದೆ. ಪಕ್ಕದಲ್ಲಿದ್ದ ದಯಾನಂದ್‌ನನ್ನು ಕೇಳಿದ ಸಂದರ್ಭ ಬಿದ್ದು ಗಾಯವಾಗಿದೆ ಎಂದು ಹೇಳಿದ್ದಾನೆ. ಕೂಡಲೇ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ ಸಂದರ್ಭ ಹೊಟ್ಟೆ, ಎದೆಯ ಭಾಗದಲ್ಲಿ ಚಾಕುವಿನಿಂದ ಚುಚ್ಚಿರುವುದು ಬೆಳಕಿಗೆ ಬಂದಿದೆ. ಗಾಯಾಳುವನ್ನು ವಿಚಾರಿಸಿದಾಗ ದಯಾನಂದ್ ಪ್ರಸಾದ್ ಹಲ್ಲೆಗೈದಿರುವುದಾಗಿ ವಿಚಾರ ತಿಳಿಸಿದ್ದಾರೆ.

ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ . ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನ.8 ರಂದು ಮೃತಪಟ್ಟಿದ್ದಾರೆ. ಬಳಿಕ ಆರೋಪಿ ದಯಾನಂದ್ ತಲೆಮರೆಸಿಕೊಂಡಿದ್ದು, ಆತನನ್ನು ತನಿಖಾ ತಂಡ ಬೆಂಗಳೂರಿನಲ್ಲಿ ಪತ್ತೆಹಚ್ಚಿ ಬಂಧಿಸಿ ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. 'ಬಿಎನ್‌ಎಸ್‌ 103 (01) ಸೆಕ್ಷನ್ ಅಡಿ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 2
Sad Sad 2
Wow Wow 0